ಕುಂದಾಪುರ, ಎ.3: ಬೆಂಗಳೂರು-ಮಂಗಳೂರು ರೈಲು ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ಬಹುತೇಕ ಬಾರಿ ಸರಿಯಾದ ಸಮಯಕ್ಕೆ ಬಂದರೂ ಕೂಡ ಮಂಗಳೂರಿನ ಮತ್ತೊಂದು ನಿಲ್ದಾಣ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಬರುವಾಗ ವಿಳಂಬಕ್ಕೆ ಬೆಂಗಳೂರು -ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲನ್ನು ಕಾರಣವಾಗಿಸಿ ಹೇಳಿಕೆ ಕೊಡುತ್ತಿರುವುದನ್ನು ಕುಂದಾಪುರ ರೈಲ್ವೇ ಹಿತರಕ್ಷಣಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಮಂಗಳೂರು ಬೆಂಗಳೂರು ರೈಲಿನ ಕಾರಣದಿಂದಲೇ ಪಂಚಗಂಗಾ ಎಕ್ಸ್‌ಪ್ರೆಸ್ ಅತ್ಯಂತ ಕ್ಲಿಷ್ಟಕರ ಸಮಯವಾದ ಸಂಜೆ 6.50ಕ್ಕೆ ಬೆಂಗಳೂರಿನಿಂದ ಹೊರಡುತ್ತಿದ್ದು ಇಲ್ಲವಾದಲ್ಲಿ ಸಂಜೆ 7.30ಕ್ಕೆ ಹೊರಡಬಹುದಾಗಿತ್ತು. ಅಲ್ಲದೇ ಬೆಳಿಗ್ಗೆಯೂ ಬೆಂಗಳೂರಿಗೆ ಆರು ಗಂಟೆಗೆ ತಲುಪಬಹುದಾಗಿದ್ದ ಪಂಚ ಗಂಗಾ ರೈಲಿಗೆ ಮಂಗಳೂರು ಬೆಂಗಳೂರು ರೈಲಿನ ಕಾರಣದಿಂದ ಏಳು ಗಂಟೆ ಸುಮಾರಿಗೆ ತಲುಪುವ ಸಮಯಪಟ್ಟಿ ಸಿಕ್ಕಿದ್ದು ಅಷ್ಟಾಗಿಯೂ ಮಂಗಳೂರು ರೈಲುಗಳ ವಿಳಂಬಕ್ಕೆ ಪಂಚಗಂಗಾ ರೈಲನ್ನೇ ಕಾರಣವಾಗಿಸುವುದು ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ತಿಳಿಸಿದೆ.
ಬಹುತೇಕ ದಿನ ಮಂಗಳೂರು ಜಂಕ್ಷನ್ ನಿಲ್ಕಾಣಕ್ಕೆ ಬೆಳಿಗ್ಗೆ 6.50ರ ಬದಲು 7 ಗಂಟೆ ಸುಮಾರಿಗೆ ಬರುವ ರೈಲಿನ ಹತ್ತು ನಿಮಿಷ ವಿಳಂಬವನ್ನು ದೂರುವುದು ಹಾಸ್ಯಾಸ್ಪದವಾಗಿದ್ದು, ಈ ಹಿಂದೆ ಸುಬ್ರಮಣ್ಯ ನಿಲ್ದಾಣಕ್ಕೆ ಐದು ಹತ್ತಕ್ಕೆ ಬರುತಿದ್ದ ಬೆಂಗಳೂರು ಮಂಗಳೂರು ರೈಲನ್ನು ಅನಗತ್ಯ ಒತ್ತಡ ಹೇರಿ ನಾಲ್ಕೂ ಐವತ್ತಕ್ಕೆ ಬರುವಂತೆ ಇಲಾಖೆ ಯಿಂದ ಸಮಯಪಟ್ಚಿ ಬದಲಾಯಿಸಿ ಈಗ ರೈಲು ಹತ್ತು ನಿಮಿಷ ವಿಳಂಬವಾಗುತ್ತದೆ ಎಂಬುದು ಸರಿಯಲ್ಲ ಎಂದು ಸಮಿತಿ ತಿಳಿಸಿದೆ.
ಬೆಂಗಳೂರು ಮಂಗಳೂರು ರೈಲುಗಳ ಸಮಯಪಟ್ಚಿ ಬೇಕಾದರೆ ಬದಲಾಯಿಸುವ ಅವಕಾಶಗಳನ್ನು ಗಮನಿಸ ಬೇಕೇ ಹೊರತೂ ಬೆಂಗಳೂರು ಉಡುಪಿ ಕಾರವಾರದ ಜೀವನಾಡಿ ಪಂಚಗಂಗಾ ರೈಲಿನ ಕ್ರಾಸಿಂಗ್ ಬಗ್ಗೆ ಮಾತಾಡುವುದು ಸರಿಯಲ್ಲ ಎಂದು ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

