Dailyhunt
ಮೇ 15ರಿಂದ ಎರಡು ದಿನಗಳ ಕಾಲ 'ಕ್ಯಾಂಪಸ್ ನಿಂದ ವೃತ್ತಿ ಕಡೆಗೆ' ಶೃಂಗಸಭೆ ಆಯೋಜನೆ

ಮೇ 15ರಿಂದ ಎರಡು ದಿನಗಳ ಕಾಲ 'ಕ್ಯಾಂಪಸ್ ನಿಂದ ವೃತ್ತಿ ಕಡೆಗೆ' ಶೃಂಗಸಭೆ ಆಯೋಜನೆ

ಬೆಂಗಳೂರು : ಮೇ 15 ಮತ್ತು 16ರಂದು ಇಲ್ಲಿನ ಲಲಿತ್ ಅಶೋಕ್ ಹೋಟೆಲ್‍ನಲ್ಲಿ 'ಕ್ಯಾಂಪಸ್ ನಿಂದ ವೃತ್ತಿ ಕಡೆಗೆ' (ಕ್ಯಾಂಪಸ್ ಟು ಕರಿಯರ್-ಸಿ2ಸಿ) ಶೃಂಗಸಭೆಯನ್ನು ಆಯೋಜಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೃಂಗಸಭೆಯ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಉನ್ನತ ಶಿಕ್ಷಣವನ್ನು ಹೆಚ್ಚು ಕೌಶಲ್ಯಾಧಾರಿತ ಶಿಕ್ಷಣದೆಡೆಗೆ ಉತ್ತೇಜಿಸುವ ದೃಷ್ಟಿಯಿಂದ ಶೃಂಗಸಭೆಯನ್ನು ಆಯೋಜಿಸಲಾಗಿದ್ದು, ಸಭೆಯಲ್ಲಿ ರಾಜ್ಯದ ಪ್ರಮುಖ ಕೈಗಾರಿಕಾ ಸಂಸ್ಥೆಗಳು ಶಿಕ್ಷಣ ತಜ್ಞರು ಹಾಗೂ ಸರಕಾರ ಒಂದೆಡೆ ಸೇರಿ ಚರ್ಚಿಸಲಾಗುತ್ತದೆ.

ಜೊತೆಗೆ ರಾಜ್ಯದ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿ ಕೊಡುವಂತಹ ಶಿಕ್ಷಣ ನೀಡುವ ಮಹತ್ವದ ಕಾರ್ಯ ನಡೆಯಲಿದೆ ಎಂದರು.

ರಾಜ್ಯದ ಪ್ರತಿಷ್ಠಿತ ಕೈಗಾರಿಕಾ ಕಂಪನಿಗಳು ಈ ಎರಡು ದಿನದ ಶೃಂಗಸಭೆಯಲ್ಲಿ ಪಾಲ್ಗೊಂಡು ವಿದಾ-್ಯರ್ಥಿಗಳಿಗೆ ಅವಶ್ಯಕವಾಗಿ ಬೇಕಾಗಿರುವ ಶಿಕ್ಷಣ ಉದ್ಯೋಗ ಮತ್ತು ಅವಕಾಶಗಳ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ ಎಂದು ಸುಧಾಕರ್ ವಿವರಿಸಿದರು.

ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಾಕಷ್ಟು ಬದಲಾಗಿದೆ. ಬದಲಾದ ಪರಿಕಲ್ಪನೆಗೆ ಸೂಕ್ತವಾಗಿ ನಾವು ವಿದ್ಯಾರ್ಥಿಗಳನ್ನು ಕೌಶಲಧಾರಿತ ಶಿಕ್ಷಣದೊಂದಿಗೆ ಸಜ್ಜುಗೊಳಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ಶೃಂಗಸಭೆಯು ಶೈಕ್ಷಣಿಕ ವಲಯವನ್ನು ಔದ್ಯೋಗಿಕ ವಲಯದ ಸಮೀಪಕ್ಕೆ ತರಲಿದೆ. ಉದ್ಯಮ ವಲಯ ತಮ್ಮ ಅಗತ್ಯಗಳು ಏನು ಎಂಬುದನ್ನು ಈವರೆಗೂ ಮುಕ್ತವಾಗಿ ಹಂಚಿಕೊಳ್ಳಲು ಮುಂದೆ ಬಂದಿಲ್ಲ. ನಾವು ನಮ್ಮ ಪದವೀಧರರನ್ನು ಉದ್ಯಮಗಳ ಬೇಡಿಕೆಗೆ ಅನುಗುಣವಾಗಿ ತಯಾರಿ ಮಾಡಬೇಕು ಎಂದು ಅವರು ಹೇಳಿದರು.

ವಿದೇಶಿ ಭಾಷೆ ಕಲಿಕೆಗೆ ಹೆಚ್ಚು ಗಮನ: ಕಾಲೇಜುಗಳಲ್ಲಿ ಬಿಬಿಎ, ಬಿಸಿಎ ಕೋರ್ಸ್‍ಗಳಿಗೆ ಒತ್ತು ನೀಡಲಾಗುತ್ತಿದ್ದು, ಪ್ರಯೋಗಾಲಯ, ಅಗತ್ಯ ಸಾಫ್ಟ್‌ ವೇರ್, ಕೌಶಲಕ್ಕೆ ಆದ್ಯತೆ ನೀಡಲಾಗಿದೆ. ಜರ್ಮನ್, ಜಪಾನಿ ಭಾಷೆ ಕಲಿತವರಿಗೆ ಉದ್ಯೋಗ ಅವಕಾಶಗಳು ಹೆಚ್ಚಿರುವುದು ನಮ್ಮ ಗಮನಕ್ಕೆ ಬಂದಿದ್ದು, ನಮ್ಮ ಕಾಲೇಜುಗಳಲ್ಲಿ ವಿದೇಶಿ ಭಾಷೆ ಕಲಿಕೆಗೆ ಹೆಚ್ಚು ಗಮನ ಕೇಂದ್ರಿಕರಿಸಲಿದ್ದೇವೆ. ಫಲಿತಾಂಶ ಆಧಾರಿತ ಉನ್ನತ ಶಿಕ್ಷಣ ನಮ್ಮ ಉದ್ದೇಶವಾಗಿದೆ ಎಂದು ಡಾ.ಎಂ.ಸಿ.ಸುಧಾಕರ್ ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುಷ್ಬೂ ಗೊಯೆಲ್ ಚೌಧರಿ, ಆಯುಕ್ತೆ ಮಂಜುಶ್ರೀ, ಕೌಶಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಮಣಿಪಾಲ್ ಅಕಾಡೆಮಿಯ ಏಕಲವ್ಯ ಬರೊಚ ಸೇರಿದಂತೆ ಇತರರು ಇದ್ದರು.

ಸಂಪುಟದಲ್ಲಿ ರಾಜ್ಯ ಶಿಕ್ಷಣ ನೀತಿ ಬಗ್ಗೆ ತೀರ್ಮಾನ: 'ರಾಜ್ಯ ಶಿಕ್ಷಣ ನೀತಿ ಸಂಬಂಧಪಟ್ಟಂತೆ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಈಗಾಗಲೇ ಉನ್ನತ ಶಿಕ್ಷಣದಲ್ಲಿ ರಾಜ್ಯ ಶಿಕ್ಷಣ ನೀತಿಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ. ಉಳಿದಂತೆ ಶಿಕ್ಷಣದಲ್ಲಿನ ಉತ್ಕೃಷ್ಟತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲ ಚರ್ಚೆಗಳು ನಡೆಯುತ್ತಿದೆ'

-ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ

Dailyhunt
Disclaimer: This content has not been generated, created or edited by Dailyhunt. Publisher: Varthabharathi