Dailyhunt
MediaOne ಫೇಸ್‌ಬುಕ್ ಪುಟದ ನಿರ್ಬಂಧ ತೆರವು; ಹೈಕೋರ್ಟ್ ನೋಟಿಸ್ ಬಳಿಕ ವೀಕ್ಷಣೆಗೆ ಮುಕ್ತ

MediaOne ಫೇಸ್‌ಬುಕ್ ಪುಟದ ನಿರ್ಬಂಧ ತೆರವು; ಹೈಕೋರ್ಟ್ ನೋಟಿಸ್ ಬಳಿಕ ವೀಕ್ಷಣೆಗೆ ಮುಕ್ತ

ತಿರುವನಂತಪುರಂ: ಮುಂಚಿತ ಸೂಚನೆ ನೀಡದೆ ಭಾರತದಲ್ಲಿ ನಿರ್ಬಂಧಿಸಲ್ಪಟ್ಟಿದ್ದ ಪ್ರಮುಖ ಮಲಯಾಳಂ ಸುದ್ದಿ ವಾಹಿನಿ ಮೀಡಿಯಾಒನ್ ಟಿವಿಯ ಅಧಿಕೃತ ಫೇಸ್‌ ಬುಕ್ ಪುಟಕ್ಕೆ ಒಂದು ವಾರದ ಬಳಿಕ ಮತ್ತೆ ವೀಕ್ಷಣೆಗೆ ಮುಕ್ತವಾಗಿದೆ.

ನಿರ್ಬಂಧವನ್ನು ಸ್ವಯಂಚಾಲಿತವಾಗಿ ತೆರವುಗೊಳಿಸಲಾಗಿದೆ ಎಂದು ಚಾನೆಲ್ ತಿಳಿಸಿದೆ.

ಫೇಸ್‌ ಬುಕ್‌ ನ ಮಾಲೀಕತ್ವ ಹೊಂದಿರುವ ಮೆಟಾ ಪ್ಲಾಟ್‌ಫಾರ್ಮ್ಸ್ ಸಂಸ್ಥೆ "ಸರ್ಕಾರದ ವಿನಂತಿಯ ಅವಧಿ ಮುಗಿದಿದೆ ಅಥವಾ ರದ್ದುಗೊಂಡಿದೆ" ಎಂದು ಮಾಹಿತಿ ನೀಡಿದೆಯೆಂದು ತಿಳಿಸಲಾಗಿದೆ.

ನಿರ್ಬಂಧ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ತೀರ್ಪುಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆ ಎಂದು ವಾದಿಸಿ, ಮೀಡಿಯಾಒನ್ ಟಿವಿ ಕೇರಳ ಹೈಕೋರ್ಟ್‌ ಮೊರೆಹೋಗಿತ್ತು. ಗಮನಾರ್ಹವಾಗಿ, ನಿರ್ಬಂಧ ತೆರವುಗೊಳ್ಳುವ ಕೆಲವೇ ಗಂಟೆಗಳ ಮೊದಲು ಹೈಕೋರ್ಟ್ ಇಮೇಲ್ ಮೂಲಕ ಮೆಟಾಗೆ ನೋಟಿಸ್ ಜಾರಿಗೊಳಿಸಿತ್ತು.

ಯಾವುದೇ ನಿರ್ದಿಷ್ಟ ವಿಷಯ ಅಥವಾ ಉಲ್ಲಂಘನೆ ಸೂಚಿಸದೆ ತನ್ನ ಫೇಸ್‌ಬುಕ್ ಪುಟವನ್ನು ಭಾರತದಲ್ಲಿ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ವಾಹಿನಿ ಅರ್ಜಿಯಲ್ಲಿ ಹೇಳಿದೆ. ನೀತಿ ಅಥವಾ ಕಾನೂನು ಆದೇಶಗಳಡಿ ಪ್ಲಾಟ್‌ ಫಾರ್ಮ್‌ ಗಳು ನಿರ್ದಿಷ್ಟ ವಿಷಯವನ್ನು ತೆಗೆದುಹಾಕಬಹುದಾದರೂ, ಸಂಪೂರ್ಣ ಪುಟವನ್ನೇ ನಿರ್ಬಂಧಿಸುವುದು ಅಧಿಕಾರ ಮಿತಿಯನ್ನು ಮೀರುವ ಕ್ರಮವಾಗಿದೆ ಎಂದು ಅದು ವಾದಿಸಿದೆ.

ಮೀಡಿಯಾಒನ್ ವಿರುದ್ಧ ಇಂತಹ ಕ್ರಮ ಇದೇ ಮೊದಲಲ್ಲ. 2022ರ ಜನವರಿಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಗೃಹ ಸಚಿವಾಲಯದ ಭದ್ರತಾ ಅನುಮತಿ ನಿರಾಕರಣೆಯನ್ನು ಉಲ್ಲೇಖಿಸಿ 'ರಾಷ್ಟ್ರೀಯ ಭದ್ರತಾ ಕಾರಣಗಳಿಂದ' ವಾಹಿನಿಯ ಪ್ರಸಾರವನ್ನು ನಿಷೇಧಿಸಿತ್ತು.

ಆದರೆ, 2023ರ ಎಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಈ ನಿಷೇಧವನ್ನು ರದ್ದುಪಡಿಸಿತು. 'ರಾಷ್ಟ್ರೀಯ ಭದ್ರತೆ' ಎಂಬ ಕಾರಣವನ್ನು ಏಕಾಏಕಿ ಹೇಳಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತು. ಸರ್ಕಾರವನ್ನು ಟೀಕಿಸುವುದರಿಂದ ಮಾತ್ರ ಯಾವುದೇ ಮಾಧ್ಯಮವನ್ನು 'ರಾಷ್ಟ್ರವಿರೋಧಿ' ಎಂದು ಕರೆಯಲು ಸಾಧ್ಯವಿಲ್ಲ ಎಂದು ಕೂಡ ಸ್ಪಷ್ಟಪಡಿಸಿತು.

Dailyhunt
Disclaimer: This content has not been generated, created or edited by Dailyhunt. Publisher: Varthabharathi