ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಮೋದಿ ಭಾರತದ ಇಂಧನ ಭದ್ರತೆಯನ್ನು ಅಮೆರಿಕಕ್ಕೆ ಒತ್ತೆಯಿಟ್ಟ 'ಹೇಡಿ'ಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಎಪ್ಸ್ಟೀನ್ ಫೈಲ್ಸ್ ನಲ್ಲಿ ತನ್ನ ಹೆಸರು ಬಂದಿರುವುದರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ರೈತರ ಹಿತಾಸಕ್ತಿಗಳಿಗೆ ಮಾರಕವಾದ ವ್ಯಾಪಾರ ಒಪ್ಪಂದವೊಂದಕ್ಕೆ ಅವರು ಅಮೆರಿಕದೊಂದಿಗೆ ಸಹಿ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೇರಳ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರಚಾರದ ಭಾಗವಾಗಿ ತಿರುವನಂತಪುರಂನ ಪುತನ್ತೋಪುನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಅವರು ಮಾತನಾಡುತ್ತಿದ್ದರು. ಪಶ್ಚಿಮ ಏಶ್ಯ ಸಂಘರ್ಷದಲ್ಲಿ, ಮೋದಿಯವರು ಅಮೆರಿಕ ಮತ್ತು ಇಸ್ರೇಲ್ ಎದುರು ಮಂಡಿಯೂರಿದರು, ಅದರ ಫಲವಾಗಿ, ಇತರ ದೇಶಗಳೊಂದಿಗೆ ಭಾರತವೂ ಕಷ್ಟಪಡಬೇಕಾಯಿತು ಎಂದು ಅವರು ಹೇಳಿದರು.
''ನಮ್ಮ ಪ್ರಧಾನಿ ಬೆನ್ನೆಲುಬಿಲ್ಲದ ಹೇಡಿ. ಅವರು ರಾಜಿ ಮಾಡಿಕೊಂಡಿರುವ ವ್ಯಕ್ತಿ. ಭಾರತದ ಪರವಾಗಿ ಸದೃಢವಾಗಿ ನಿಲ್ಲುವ ಎದೆಗಾರಿಕೆ ಅವರಿಗಿಲ್ಲ. ಅದಕ್ಕಾಗಿ ನಾವು ಪ್ರತಿ ದಿನವೂ ಬೆಲೆ ತೆರುತ್ತಿದ್ದೇವೆ. ಅವರ ಹೆಸರು ಶಿಶುಕಾಮಿ ಎಪ್ಸ್ಟೀನ್ ಫೈಲ್ ಗಳಲ್ಲಿದೆ. ಅದರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ಮಂಡಿಯೂರಿದ್ದಾರೆ'' ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು.
ಪಶ್ಚಿಮ ಏಶ್ಯ ಸಂಘರ್ಷದ ವೇಳೆ, ಮೋದಿಯ ನೀತಿಗಳು ಕೊಲ್ಲಿ ವಲಯದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ನೀಡಲಿಲ್ಲ ಎಂಬುದಾಗಿಯೂ ಅವರು ಆರೋಪಿಸಿದರು.
LDF ಮೋದಿಯ 'ಬಿ-ಟೀಮ್':
ಕೇರಳದ ಎಡ ಪ್ರಜಾಸತ್ತಾತ್ಮಕ ರಂಗ (LDF) ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್, ನರೇಂದ್ರ ಮೋದಿಯ ''ಬಿ-ಟೀಮ್'' (ಸಹಾಯಕ ತಂಡ) ಎಂಬುದಾಗಿಯೂ ಅವರು ಆರೋಪಿಸಿದರು.
''ಈ ಬಗ್ಗೆ ಸ್ವಲ್ಪ ಯೋಚಿಸಿ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸೆಟೆದು ನಿಂತು ಅನುಷ್ಠಾನ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐ ಅಥವಾ ಇತರ ಕೇಂದ್ರೀಯ ಸಂಸ್ಥೆಗಳ ದಾಳಿಗೆ ಒಳಗಾದ ಒಬ್ಬನೇ ಒಬ್ಬ ನಾಯಕ ಅಥವಾ ನಾಯಕಿಯನ್ನು ಹೆಸರಿಸಿ'' ಎಂದು ಅವರು ಹೇಳಿದರು.
LDF ಸರಕಾರವು ಹೆಚ್ಚೆಚ್ಚು ಅವಧಿ ಅಧಿಕಾರದಲ್ಲಿರುವಂತೆಯೇ ಜನರಿಗೆ ಕಡಿಮೆ ಅವಕಾಶಗಳನ್ನು ನೀಡುತ್ತದೆ ಎಂದು ಪ್ರಿಯಾಂಕಾ ಆರೋಪಿಸಿದರು.

