Friday, 30 Oct, 12.15 am ವಾರ್ತಾಭಾರತಿ

ಕ್ರೀಡೆ
ಮುಂಬೈಗಿಂತ ಆಚೆ ಯೋಚಿಸಿ: ರಾಹುಲ್ ಟೆಸ್ಟ್ ಆಯ್ಕೆ ಟೀಕಿಸಿದ ಮಾಂಜೇಕರ್‌ಗೆ ಶ್ರೀಕಾಂತ್ ತರಾಟೆ

ಹೊಸದಿಲ್ಲಿ: ಮುಂಬರುವ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಆಯ್ಕೆ ಮಾಡಿರುವುದನ್ನು ಟೀಕಿಸಿರುವ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕವಿವರಣೆಗಾರ ಸಂಜಯ್ ಮಾಂಜ್ರೇಕರ್‌ರನ್ನು ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ತರಾಟೆಗೆ ತೆಗೆದುಕೊಂಡರು.

ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ರಾಹುಲ್ ಅಮೋಘ ಫಾರ್ಮ್‌ನಲ್ಲಿದ್ದು, ಡಿಸೆಂಬರ್-ಜನವರಿಯಲ್ಲಿ ನಿಗದಿಯಾಗಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ರಾಹುಲ್ ಟೀಮ್ ಇಂಡಿಯಾಕ್ಕೆ ವಾಪಸಾಗಿದ್ದಾರೆ.

''ಐಪಿಎಲ್‌ನಲ್ಲಿ ನೀಡಿರುವ ಪ್ರದರ್ಶನದ ಆಧಾರದಲ್ಲಿ ಆಟಗಾರನನ್ನು ಟೆಸ್ಟ್ ಕ್ರಿಕೆಟ್ ತಂಡಕ್ಕೆ ಮತ್ತೆ ಸೇರಿಸಿಕೊಳ್ಳುವುದು ಕೆಟ್ಟ ನಿದರ್ಶನ. ಇದು ರಣಜಿ ಟ್ರೋಫಿಯಲ್ಲಿ ಆಡುವ ಆಟಗಾರರ ಪ್ರೇರಣೆಯ ಮೇಲೆ ತೀವ್ರ ಧಕ್ಕೆ ತರುತ್ತದೆ'' ಎಂದು ಮಾಂಜ್ರೇಕರ್ ಹೇಳಿದ್ದರು.

''ಕೇವಲ ಮುಂಬೈ ಮಹಾನಗರ ಮಾತ್ರವಲ್ಲ ದೇಶದ ಇತರ ಭಾಗಗಳಿಂದ ಬರುವ ಕ್ರಿಕೆಟಿಗರ ಕುರಿತೂ ಮಾಂಜ್ರೇಕರ್ ಯೋಚಿಸಬೇಕು. ಮಾಂಜ್ರೇಕರ್ ಮುಂಬೈಗಿಂತ ಆಚೆ ಯೋಚಿಸುವುದೇ ಇಲ್ಲ. ಇದು ಅವರ ಸಮಸ್ಯೆ. ನಾವು ಯಾವಾಗಲೂ ತಟಸ್ಥವಾಗಿದ್ದುಕೊಂಡು ಮಾತನಾಡಬೇಕು. ಮಾಂಜ್ರೇಕರ್ ಅವರಂತಹ ಜನರಿಗೆ ಎಲ್ಲವೂ ಬಾಂಬೆ, ಬಾಂಬೆ ಬಾಂಬೆ. ಅವರು ಬಾಂಬೆಗಿಂತ ಆಚೆಯೂ ಯೋಚಿಸುವ ಅಗತ್ಯವಿದೆ'' ಎಂದು 60ರ ವಯಸ್ಸಿನ ಶ್ರೀಕಾಂತ್ ಹೇಳಿದ್ದಾರೆ.

''ಏನಾದರೂ ಪ್ರಶ್ನಿಸುವುದು ಮಾಂಜ್ರೇಕರ್ ಅವರ ಕೆಲಸವಾಗಿದ್ದು, ಹೀಗಾಗಿ ಅವರನ್ನು ಅವರಷ್ಟಕ್ಕೆ ಬಿಡಬೇಕು. ಟೆಸ್ಟ್ ತಂಡಕ್ಕೆ ರಾಹುಲ್ ಆಯ್ಕೆ ಪ್ರಶ್ನಿಸುವುದು ಸರಿಯಲ್ಲ. ಅವರು ಟೆಸ್ಟ್ ನಲ್ಲಿ ಚೆನ್ನಾಗಿ ಆಡಬಲ್ಲರು. ಮಾಂಜ್ರೇಕರ್ ಮಾತನ್ನು ನಾನು ಒಪ್ಪಲಾರೆ. ವಿವಾದವನ್ನು ಸೃಷ್ಟಿಸುವ ಉದ್ದೇಶದಿಂದಲೇ ಏನಾದರೊಂದು ಪ್ರಶ್ನೆ ಕೇಳುವುದು ಸರಿಯಲ್ಲ. ರಾಹುಲ್ ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದು, ಅವರ ಟೆಸ್ಟ್ ದಾಖಲೆಯನ್ನೊಮ್ಮೆ ನೋಡುವುದು ಉತ್ತಮ'' ಎಂದು ಶ್ರೀಕಾಂತ್ ಸಲಹೆ ನೀಡಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top