Dailyhunt Logo
  • Light mode
    Follow system
    Dark mode
    • Play Story
    • App Story
ಮುಂದಿನ ನಾಲ್ಕು ದಿನ ಕರಾವಳಿ ಸೇರಿ ರಾಜ್ಯಾದ್ಯಂತ ಭಾರೀ ಮಳೆಯ ಮುನ್ಸೂಚನೆ: ಹವಾಮಾನ ಕೇಂದ್ರ

ಮುಂದಿನ ನಾಲ್ಕು ದಿನ ಕರಾವಳಿ ಸೇರಿ ರಾಜ್ಯಾದ್ಯಂತ ಭಾರೀ ಮಳೆಯ ಮುನ್ಸೂಚನೆ: ಹವಾಮಾನ ಕೇಂದ್ರ

ಡುಪಿ: ಮುಂದಿನ ಮೂರು- ನಾಲ್ಕು ದಿನಗಳ ಕಾಲ ಕರಾವಳಿ, ಮಲೆನಾಡು ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಬೆಂಗಳೂರಿನ ಹವಾಮಾನ ಕೇಂದ್ರ ನೀಡಿದೆ.

ಜೂನ್ 3ರಿಂದ 7ರವರೆಗೆ ಈ ಮುನ್ಸೂಚನೆ ಇದ್ದು, ಮುಂದಿನ ಮೂರು ದಿನ ಕರಾವಳಿ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಆರೆಂಜ್ ಹಾಗೂ ಉಳಿದ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ನೀಡಲಾಗಿದೆ.

ಜೂ.7ರಂದು ಎಲ್ಲಾ ಜಿಲ್ಲೆಗಳಿಗೂ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಗಂಟೆಗೆ 30ರಿಂದ 40ಕಿ.ಮೀ. ವೇಗದ ಗಾಳಿಯೊಂದಿಗೆ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ. ಜೂ.6ಕ್ಕೆ ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗುವ ಸೂಚನೆ ನೀಡಲಾಗಿದೆ.

ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ಬೀದರ್, ಕಲಬುರ್ಗಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಗಂಟೆಗೆ 50ರಿಂದ 60ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಭಾರೀ ಮಳೆ ಬೀಳುವ ಮುನ್ಸೂಚನೆ ನೀಡಿದರೆ ಗದಗ್, ಹಾವೇರಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಬಿರುಗಾಳಿ ಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ತುಮಕೂರು, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲೂ 30ರಿಂದ 40ಕಿ.ಮೀ. ವೇಗದ ಗಾಳಿಯೊಂದಿಗೆ ಗುಡುಗು-ಸಿಡಿಲು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಕೊಡಗು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಸಾಧಾರಣ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆ: ಮಂಗಳವಾರ ಸಂಜೆಯಿಂದ ಉಡುಪಿ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುತಿದ್ದು, ಮಳೆಗಾಲದ ವಾತಾವರಣ ಮೊದಲ ಬಾರಿಗೆ ಕಂಡುಬಂದಿದೆ. ಬಿರುಬಿಸಿಲು, ಕಡು ಸೆಖೆಯಿಂದ ಕಂಗೆಟ್ಟಿದ್ದ ಜನತೆ ಇದೇ ಮೊದಲ ಬಾರಿ ಆಹ್ಲಾದಕರ ವಾತಾವರಣದ ಸವಿ ಅನುಭವಿಸಿದರು.

ಆದರೆ ಈಗಾಗಲೇ ಜೂ.1ರಿಂದ ಪ್ರಾರಂಭಗೊಳ್ಳಬೇಕಿದ್ದ ಮುಂಗಾರು ಈ ಬಾರಿ ಶೀಘ್ರದಲ್ಲಿ ಕರಾವಳಿ ಪ್ರವೇಶಿಸುವ ಲಕ್ಷಣ ಇನ್ನೂ ಕಂಡುಬಂದಿಲ್ಲ. ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಮುಂಗಾರು ಮಾನ್ಸೂನ್ ಕೇರಳ ತಲುಪುವ ನಿರೀಕ್ಷೆ ಇದ್ದು, ಆ ಬಳಿಕ ನಾಲ್ಕೈದು ದಿನಗಳಲ್ಲಿ ಕರ್ನಾಟಕ ಕರಾವಳಿಯನ್ನು ಪ್ರವೇಶಿಸುವ ನಿರೀಕ್ಷೆ ಇದೆ.

ಬುಧವಾರ ಬೆಳಗ್ಗೆ ಹನಿ ಮಳೆಯಾದರೆ, ಸಂಜೆಯ ಬಳಿಕ ಸಾಧಾರಣ ಮಳೆ ಸುರಿಯುತ್ತಿದೆ. ಇಂದು ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 28.2ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ ಅತ್ಯಧಿಕ 44.2ಮಿ.ಮೀ. ಮಳೆ ಬಿದ್ದರೆ, ಕುಂದಾಪುರದಲ್ಲಿ 3.8, ಕಾರ್ಕಳದಲ್ಲಿ 27.2, ಉಡುಪಿಯಲ್ಲಿ 23.0, ಬ್ರಹ್ಮಾವರದಲ್ಲಿ 21.9, ಕಾಪುವಲ್ಲಿ 20.9 ಹಾಗೂ ಬೈಂದೂರಿನಲ್ಲಿ 19.4ಮಿ.ಮೀ. ಮಳೆಯಾದ ವರದಿ ಬಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi