Dailyhunt Logo
  • Light mode
    Follow system
    Dark mode
    • Play Story
    • App Story
ನಾಡಗೀತೆಗೆ ನಿರ್ದಿಷ್ಟ ರಾಗ, ಅವಧಿ: ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್

ನಾಡಗೀತೆಗೆ ನಿರ್ದಿಷ್ಟ ರಾಗ, ಅವಧಿ: ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಆ. 28: ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ'ಯ ಗಾಯನಕ್ಕೆ ನಿರ್ದಿಷ್ಟ ರಾಗ ಮತ್ತು ಅವಧಿ ನಿಗದಿಪಡಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

2022ರ ಸೆಪ್ಟೆಂಬರ್ 25ರ ಸರಕಾರಿ ಆದೇಶವನ್ನು ರದ್ದುಗೊಳಿಸಲು ಉಚ್ಚ ನ್ಯಾಯಾಲಯ ನಿರಾಕರಿಸಿದ್ದನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಸಲ್ಲಿಸಿದ ರಜಾಕಾಲದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಬಿ. ಮಹಾದೇವನ್ ಅವರನ್ನು ಒಳಗೊಂಡ ಪೀಠ ವಜಾಗೊಳಿಸಿದೆ.

ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿರುವ ರಾಗದಲ್ಲಿ ನಾಡಗೀತೆಯನ್ನು ಎರಡೂವರೆ ನಿಮಿಷಗಳ ಕಾಲ ಹಾಡಬೇಕು ಎಂದು ಈ ಆದೇಶ ಕಡ್ಡಾಯಗೊಳಿಸಿತ್ತು.

''ನಾಡಗೀತೆಯ ಗಾಯನದಲ್ಲಿ ರಾಗ ಹಾಗೂ ಹಾಡಿನ ಅವಧಿ ಎರಡರಲ್ಲೂ ಏಕರೂಪತೆ ಇರಬೇಕು ಎಂದು ನಾವು ಗಮನಿಸುತ್ತೇವೆ. ಈ ಸಂದರ್ಭ ಪ್ರಶ್ನಿಸಲಾದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಮಗೆ ಯಾವುದೇ ಕಾರಣ ಕಂಡುಬರುತ್ತಿಲ್ಲ'' ಎಂದು ಪೀಠ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಅಭಿಪ್ರಾಯಿಸಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಮೋಹನ್ ವಿ. ಕಟರ್ಕಿ ಹಾಜರಿದ್ದರು.

ತಜ್ಞರು ಸಂಯೋಜಿಸಿದ ರಾಗವನ್ನು ಸರಕಾರ ನಿಗದಿಪಡಿಸಬಹುದು. ಈ ಆದೇಶದಿಂದ ಯಾರ ಹಕ್ಕುಗಳಿಗೂ ಧಕ್ಕೆಯಾಗುವುದಿಲ್ಲ ಎಂದು ಉಚ್ಚ ನ್ಯಾಯಾಲಯ 2026ರ ಜನವರಿ 5ರಂದು ತೀರ್ಪು ನೀಡಿತ್ತು. ನಾಡಗೀತೆಗೆ ರಾಗವನ್ನು ಸರಕಾರವೇ ನಿರ್ಧರಿಸಲು ಸಾಧ್ಯವಿಲ್ಲ ಎಂಬ ಕೃಷ್ಣಮೂರ್ತಿ ಅವರ ವಾದ ಸಮರ್ಥನೀಯವಲ್ಲ ಎಂದು ತಿರಸ್ಕರಿಸಿತ್ತು.

ಕರ್ನಾಟಕದ ನಾಡಗೀತೆಯ ಗಾಯನವನ್ನು ಏಕರೂಪಗೊಳಿಸುವ ಸರಕಾರದ ಪ್ರಯತ್ನದ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್‌ ನ 27 ಆಗಸ್ಟ್ 2026ರ ಆದೇಶ ಅಂತಿಮ ತೆರೆ ಎಳೆದಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi