Dailyhunt
ನೆದರ್‌ಲ್ಯಾಂಡ್ ಸೋಲಿಸಿದ ನಮೀಬಿಯ

ನೆದರ್‌ಲ್ಯಾಂಡ್ ಸೋಲಿಸಿದ ನಮೀಬಿಯ

photo:twitter

ಅಬುಧಾಬಿ, ಅ. 20: ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯಾವಳಿಯ 'ಎ' ಗುಂಪಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬುಧವಾರ ನಮೀಬಿಯವು ನೆದರ್‌ಲ್ಯಾಂಡ್ ತಂಡವನ್ನು ಆರು ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ. 40 ಎಸೆತಗಳಲ್ಲಿ 66 ರನ್‌ಗಳನ್ನು ಸಿಡಿಸಿ ಪವರ್-ಹಿಟ್ಟಿಂಗ್‌ನ ಪ್ರದರ್ಶನ ನೀಡಿದ ಡೇವಿಡ್ ವೈಸ್ ನಮೀಬಿಯವನ್ನು ವಿಜಯದತ್ತ ಮುನ್ನಡೆಸಿದರು.

ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 165 ರನ್‌ಗಳ ಗುರಿಯನ್ನು ಪಡೆದ ನಮೀಬಿಯವು 19 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 166 ರನ್‌ಗಳನ್ನು ಗಳಿಸಿ ವಿಜಯವನ್ನು ಘೋಷಿಸಿತು. ವೈಸ್ ಅವರು ನಾಯಕ ಗೆರ್ಹಾರ್ಡ್ ಎರಾಸ್ಮಸ್ (32) ಜೊತೆಗೆ ನಾಲ್ಕನೇ ವಿಕೆಟ್‌ಗೆ 93 ರನ್‌ಗಳನ್ನು ಸೇರಿಸಿದರು. ಒಂದು ಹಂತದಲ್ಲಿ 9 ಓವರ್‌ಗಳಲ್ಲಿ 52 ರನ್‌ಗಳನ್ನು ಗಳಿಸುವಷ್ಟರಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ನಮೀಬಿಯ ಸಂಕಷ್ಟದಲ್ಲಿದ್ದಾಗ ವೈಸ್ ಏಕಾಂಗಿಯಾಗಿ ಹೋರಾಟ ನಡೆಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಟಾಸ್ ಗೆದ್ದ ನಮೀಬಿಯವು ನೆದರ್‌ಲ್ಯಾಂಡ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ನೆದರ್‌ಲ್ಯಾಂಡ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 164 ರನ್‌ಗಳನ್ನು ಗಳಿಸಿತು.

ಆರಂಭಿಕರಾದ ಮ್ಯಾಕಸ್ ಒ'ಡೌಡ್ 56 ಎಸೆತಗಳಲ್ಲಿ 70 ರನ್‌ಗಳನ್ನು ಸಿಡಿಸಿದರು. ಬಳಿಕ ಕಾಲಿನ್ ಆಯಕರ್‌ಮನ್ 32 ಎಸೆತಗಳಲ್ಲಿ 35 ರನ್‌ಗಳನ್ನು ಗಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi