ಮುಂಬೈ: ನೀಟ್ ಮರು ಪರೀಕ್ಷೆಯ ಫಲಿತಾಂಶ ಪ್ರಶ್ನಿಸಿ ಸಲ್ಲಿಸಿದ್ದ ನಾಲ್ಕು ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ಛತ್ರಪತಿ ಸಂಭಾಜಿನಗರ ಪೀಠ ವಜಾಗೊಳಿಸಿದ್ದು, ಪ್ರತಿ ಅರ್ಜಿದಾರರಿಗೆ 5,000ರೂ. ದಂಡ ವಿಧಿಸಿದೆ.
ಅರ್ಜಿದಾರರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಪ್ರಕಟಿಸಿದ ಫಲಿತಾಂಶದಲ್ಲಿ ದೋಷಗಳಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ದೋಷಗಳಿವೆ ಎಂದು ಆರೋಪಿಸಿದ್ದರು.
ನ್ಯಾಯಮೂರ್ತಿಗಳಾದ ಎನ್.ಬಿ. ಸೂರ್ಯವಂಶಿ ಮತ್ತು ಎ.ಡಿ. ಶಿಂಧೆ ಅವರ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ. ಆರೋಪಗಳ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯ ಸಂಬಂಧಿತ ವಿದ್ಯಾರ್ಥಿಗಳ ಮೂಲ ಉತ್ತರ ಪತ್ರಿಕೆಗಳನ್ನು ದಿಲ್ಲಿಯಿಂದ ಮುಚ್ಚಿದ ಲಕೋಟೆಯಲ್ಲಿ ತರಿಸಿತ್ತು. ಬಳಿಕ ನ್ಯಾಯಪೀಠವು ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದೆ. ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ವಕೀಲರಿಗೂ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ನೀಡಿದೆ.
ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಎನ್‌ಟಿಎ ನೀಡಿದ್ದ ಅಂಕಗಳು ಮತ್ತು ಮೂಲ ಉತ್ತರ ಪತ್ರಿಕೆಯ ಫಲಿತಾಂಶಕ್ಕೆ ಸಂಪೂರ್ಣ ಹೊಂದಿಕೆಯಾಗಿವೆ. ಯಾವುದೇ ದೋಷ ಅಥವಾ ವ್ಯತ್ಯಾಸ ಕಂಡುಬಂದಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
ವಿಚಾರಣೆ ವೇಳೆ ಕೇಂದ್ರ ಸರಕಾರ ಮತ್ತು ಎನ್‌ಟಿಎ ಪರವಾಗಿ ಹಾಜರಾದ ಹಿರಿಯ ವಕೀಲ ರೋಹಿತ್ ಸರ್ವಜ್ಞ ಎಲ್ಲಾ ಮೂಲ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದರು.
ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ, ನ್ಯಾಯಾಲಯ ಎಲ್ಲಾ 4 ಅರ್ಜಿಗಳನ್ನು ವಜಾಗೊಳಿಸಿದೆ. ತಪ್ಪು ಮಾಹಿತಿ ಆಧಾರದ ಮೇಲೆ ನ್ಯಾಯಾಲಯವನ್ನು ಸಂಪರ್ಕಿಸಿದ್ದಕ್ಕೆ ಪ್ರತಿ ಅರ್ಜಿದಾರರಿಗೆ 5,000ರೂ. ದಂಡ ವಿಧಿಸಿದೆ.

