ಹೊಸದಿಲ್ಲಿ, ಆ. 28: ನೇಪಾಳ-ಟಿಬೆಟ್ ಗಡಿಯ ರಸುವಾಗಧಿ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಭೀಕರ ಪ್ರವಾಹದ ಪರಿಣಾಮ ಸುಮಾರು 200 ಕಿ.ಮೀ. ಕೆಳಮುಖವಾಗಿ ವಿಸ್ತರಿಸಿದೆ. ನೇಪಾಳದ ನುವಾಕೋಟ್, ಧಾಡಿಂಗ್, ಚಿತ್ವಾನ್ ಮತ್ತು ನವಲ್ಪರಾಸಿ ಪೂರ್ವ ಜಿಲ್ಲೆಗಳಲ್ಲಿ ಪ್ರವಾಹದಲ್ಲಿ ಕೊಚ್ಚಿಹೋದವರ ಮೃತದೇಹಗಳು ಪತ್ತೆಯಾಗಿವೆ.
ನೇಪಾಳದಿಂದ ಕೊಚ್ಚಿಕೊಂಡು ಬಂದಿವೆ ಎಂದು ಶಂಕಿಸಲಾಗಿರುವ ಇನ್ನೂ ಮೂರು ಶವಗಳು ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಗಂಡಕ್ ನದಿಯಲ್ಲಿ ಪತ್ತೆಯಾಗಿವೆ.
ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸಂಬಂಧಿಸಿದ ಭೂಕಂಪನ ಸಂಕೇತ ಬೆಳಿಗ್ಗೆ 8.37ಕ್ಕೆ ದಾಖಲಾಗಿತ್ತು. ಕೇವಲ ಏಳು ನಿಮಿಷಗಳ ಬಳಿಕ ನೇಪಾಳ-ಟಿಬೆಟ್ ಗಡಿಯ ರಸುವಾಗಧಿಗೆ ಪ್ರವಾಹದ ಭಾರಿ ಅಲೆ ಅಪ್ಪಳಿಸಿತ್ತು. ಗಡಿ ಭದ್ರತಾ ದೃಶ್ಯಾವಳಿಗಳಲ್ಲಿ ಕಿರಿದಾದ ಕಣಿವೆಯ ಮೂಲಕ ರಭಸವಾಗಿ ಹರಿದು ಬಂದ ಪ್ರವಾಹ ಕಟ್ಟಡಗಳು ಮತ್ತು ವಾಹನಗಳನ್ನು ಕೊಚ್ಚಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಭಾರತದ ಗಡಿಯಲ್ಲಿರುವ ಚಿತ್ವಾನ್ ಜಿಲ್ಲೆಯಲ್ಲಿ 132 ಶವಗಳು ಪತ್ತೆಯಾಗಿವೆ. ಇದು ನೇಪಾಳದ ಯಾವುದೇ ಒಂದು ಜಿಲ್ಲೆಯಲ್ಲಿ ಪತ್ತೆಯಾದ ಅತಿ ಹೆಚ್ಚು ಶವಗಳ ಸಂಖ್ಯೆಯಾಗಿದೆ.
ಭೂಕಂಪನದ ಸಂಕೇತ ದಾಖಲಾಗಿದ ಏಳು ನಿಮಿಷಗಳಲ್ಲೇ ಪ್ರವಾಹದ ಅಲೆ ರಸುವಾಗಧಿಗೆ ತಲುಪಿದ್ದರೂ, ಈ ಅವಧಿಯನ್ನು ಜನರನ್ನು ಸ್ಥಳಾಂತರಿಸಲು ದೊರೆತ ಅಧಿಕೃತ ಸಮಯ ಎಂದು ಪರಿಗಣಿಸಲಾಗುವುದಿಲ್ಲ. ನೇಪಾಳದ ಪ್ರವಾಹ ನಿರ್ವಹಣಾ ಅಧಿಕಾರಿಗಳಿಗೆ ಭೋಟೆ ಕೋಶಿ ನದಿಗೆ ಪ್ರವಾಹದ ನೀರು ನುಗ್ಗಿದ ಬಳಿಕವಷ್ಟೇ ಪ್ರವಾಹದ ತೀವ್ರತೆಯ ಮಾಹಿತಿ ದೊರೆತಿತ್ತು.
ನೇಪಾಳದ ಜಲವಿಜ್ಞಾನ ಮತ್ತು ಹವಾಮಾನ ಇಲಾಖೆಯ ಜಲಶಾಸ್ತ್ರಜ್ಞ ಸೌಹಾರ್ದ ಜೋಶಿ ಅವರ ಪ್ರಕಾರ, ಬೆಳಿಗ್ಗೆ 8.40ರ ಸುಮಾರಿಗೆ ಪ್ರವಾಹವು ನೇಪಾಳಕ್ಕೆ ನುಗ್ಗಿತ್ತು. ಸುಮಾರು 10 ನಿಮಿಷಗಳಲ್ಲಿ ಸೈಬ್ರುಬೆಸಿಗೆ ತಲುಪಿತ್ತು.
'ಟಿಬೆಟ್‌ನಲ್ಲಿ ಪ್ರವಾಹದ ನೀರಿನ ಮಟ್ಟ ಏರುತ್ತಿರುವ ಮಾಹಿತಿ ನಮಗೆ ಮೊದಲೇ ದೊರೆತಿದ್ದರೆ, ಸಾವುನೋವುಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದಿತ್ತು' ಎಂದು ಜೋಶಿ ಹೇಳಿದ್ದಾರೆ.
ಪ್ರವಾಹ ಮುನ್ಸೂಚನಾ ವಿಭಾಗಕ್ಕೆ ಬೆಳಿಗ್ಗೆ 9.05ಕ್ಕೆ ಭಾರಿ ಪ್ರವಾಹದ ಕುರಿತು ಮಾಹಿತಿ ಲಭಿಸಿತು. ಬಳಿಕ ಕೆಲವೇ ನಿಮಿಷಗಳಲ್ಲಿ ರಸುವಾ, ನುವಾಕೋಟ್, ಧಾಡಿಂಗ್ ಮತ್ತು ಚಿತ್ವಾನ್ ಜಿಲ್ಲೆಗಳ ನದಿ ದಂಡೆಯಲ್ಲಿದ್ದ ಜನರಿಗೆ 6 ಲಕ್ಷಕ್ಕೂ ಹೆಚ್ಚು SMS ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಯಿತು.
ಬಳಿಕ ಪ್ರವಾಹದ ನೀರು ತ್ರಿಶೂಲಿ ನದಿಯ ಮೂಲಕ ನಾರಾಯಣಿ ನದಿಯನ್ನು ಸೇರಿತು. ಅಲ್ಲಿಂದ ನೇಪಾಳದ ದಕ್ಷಿಣ ಬಯಲು ಪ್ರದೇಶಗಳತ್ತ ಹರಿದ ಪ್ರವಾಹವು ತನ್ನೊಂದಿಗೆ ಅವಶೇಷಗಳು ಮತ್ತು ಶವಗಳನ್ನು ಕೊಚ್ಚಿಕೊಂಡು ಸಾಗಿತು.
ನಾರಾಯಣಿ ನದಿ ಭಾರತ ಪ್ರವೇಶಿಸಿದ ಬಳಿಕ ಗಂಡಕ್ ನದಿಯಾಗಿ ಹರಿಯುತ್ತದೆ. ಹೀಗಾಗಿ ಪ್ರವಾಹದಲ್ಲಿ ಕೊಚ್ಚಿಹೋದ ಶವಗಳು ಭಾರತದ ಪ್ರದೇಶಕ್ಕೂ ತಲುಪಿವೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ಸಶಸ್ತ್ರ ಸೀಮಾ ಬಲ (SSB) ಸಿಬ್ಬಂದಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನ ಶವಗಳನ್ನು ವಶಪಡಿಸಿಕೊಂಡಿದ್ದಾರೆ.
'ನೇಪಾಳದಿಂದ ಗಂಡಕ್ ನದಿಗೆ ಕೊಚ್ಚಿಕೊಂಡು ಬಂದಿವೆ ಎಂದು ನಂಬಲಾಗಿರುವ ಮೂರು ಶವಗಳನ್ನು ಇದುವರೆಗೆ ಭಾರತೀಯ ಭೂಪ್ರದೇಶದಲ್ಲಿ ವಶಪಡಿಸಿಕೊಳ್ಳಲಾಗಿದೆ' ಎಂದು ಎಸ್‌ಎಸ್‌ಬಿ ಇನ್‌ಸ್ಪೆಕ್ಟರ್ ಅರುಣ್ ಪಾಂಡೆ ತಿಳಿಸಿದ್ದಾರೆ.

