ಬೆಂಗಳೂರು : ನಗರದ ಥಣಿಸಂದ್ರದಲ್ಲಿರುವ ಬೆಂಗಳೂರು ಅನಾಲಿಟಿಕ್ಸ್ ಮತ್ತು ರಿಸರ್ಚ್ ಲ್ಯಾಬೋರೇಟರಿ ಪ್ರೈ.ಲಿ. ಘಟಕದ ಮೇಲೆ ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ದಿಢೀರನೆ ಶನಿವಾರ ದಾಳಿ ನಡೆಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ.
ದಾಳಿ ನಂತರ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ರಾಜ್ಯದಲ್ಲಿ ನೀರು ಕಲುಷಿತವಾಗುತ್ತಿದೆ. ಕೆರೆ ನೀರು, ನದಿ ನೀರು ಕಲುಷಿತಗೊಳ್ಳುತ್ತಿದೆ. ಹಾಗಾಗಿ, ನೀರು ಪರೀಕ್ಷೆ ಮಾಡುವ ಲ್ಯಾಬ್‍ಗೆ ಭೇಟಿ ನೀಡಿದ್ದೇನೆ. ಇಲ್ಲಿ ನೀರು ಸೇರಿದಂತೆ ಆಹಾರ ಪದಾರ್ಥಗಳನ್ನೂ ಪರೀಕ್ಷೆ ಮಾಡಲಾಗುತ್ತದೆ. ಒಪ್ಪಂದದ ಪ್ರಕಾರ ಮೂವರು ವಿಶ್ಲೇಷಕರು ಇರಬೇಕಿತ್ತು. ಆದರೆ, ಒಬ್ಬರೇ ವಿಶ್ಲೇಷಕರು ಲ್ಯಾಬ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಲ್ಯಾಬೋರೇಟರಿ ಚಟುವಟಿಕೆಯಿಂದ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಘಟಕವು ಯಾವುದೇ ಸೂಕ್ತವಾದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೆ ನೇರವಾಗಿ ತೆರೆದ ಗುಂಡಿಗೆ ನೀರನ್ನು ಹರಿಯ ಬಿಡಲಾಗಿದೆ. ಈ ಲ್ಯಾಬ್‍ನಲ್ಲಿ ಸ್ಯಾನಿಟರಿಯೇ ಇಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಈ ಲ್ಯಾಬ್‍ನಲ್ಲಿ ಬೇಕಾಬಿಟ್ಟಿ ಏರ್ ಟೆಸ್ಟ್ ಕೂಡ ಮಾಡುತ್ತಿದ್ದಾರೆ. ಏರ್ ಟೆಸ್ಟ್ ಗೆ 6 ಗಂಟೆಗಳು ಬೇಕಾಗುತ್ತದೆ. ಆದರೆ, ಟೆಸ್ಟ್ ಸರಿಯಾಗಿ ಮಾಡುತ್ತಿಲ್ಲ. ತಿಂಗಳಿಗೆ ಮೂರು ಸಾವಿರ ಟೆಸ್ಟ್ ಮಾಡಿದ್ದಾರೆ. ದಾಖಲೆ ಸರಿಯಾಗಿ ಇಟ್ಟಿಲ್ಲ. ವಿಶ್ಲೇಷಣೆಗೂ, ವರದಿಗೂ ತಾಳೆಯಾಗುತ್ತಿಲ್ಲ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದರು.
ಹೊಗೆಯುಗುಳುವ ಕಂಪೆನಿಗಳಿಗೆ ನಕಲಿ ಸರ್ಟಿಫಿಕೇಟ್ ಕೊಡುವ ಜಾಲವಿದೆ. ಇಂಡಸ್ಟ್ರೀಗಳಿಗೆ ನಕಲಿ ಸರ್ಟಿಫಿಕೇಟ್ ಕೊಡುವ ಜಾಲ ಪತ್ತೆಯಾಗಿದೆ. ದುಡ್ಡು ಕೊಟ್ಟರೆ ವಿಶ್ಲೇಷಿಸದೆ ವರದಿ ಕೊಡುತ್ತಾರೆ. ಬೆಂಗಳೂರಿನ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣ ಇದು. ಚಿಮುಣಿ ಇರುವ ಕಾರ್ಖಾನೆಗಳಿಗೆ ಕಡ್ಡಾಯ ಟೆಸ್ಟಿಂಗ್ ಇರುತ್ತದೆ. ಬೇಕಾಬಿಟ್ಟಿ ವಾಯುಮಾಲಿನ್ಯದ ವರದಿ ಕೊಡಲಾಗುತ್ತಿದೆ. ನಿಯಮ ಉಲ್ಲಂಘಿಸಿರುವ ಎಲ್ಲ ಕಾರ್ಖಾನೆಗಳಿಗೂ ನೋಟಿಸ್ ನೀಡುತ್ತೇವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ನೀರು ಹಾಗೂ ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ವಿಶ್ಲೇಷಣೆ ಮಾಡದೇ ಕಾಸು ಕೊಟ್ಟರೆ ಲ್ಯಾಬ್ ಟೆಸ್ಟ್ ವರದಿ ಸಿಗುತ್ತದೆ. ಪ್ರತಿಷ್ಟಿತ ಕಂಪೆನಿಗಳ ಜ್ಯೂಸ್, ಬಿಸ್ಕೆಟ್ ಕೂಡ ಇಲ್ಲೇ ಟೆಸ್ಟಿಂಗ್ ಆಗುತ್ತದೆ. ಈ ಬಗ್ಗೆ ಅಕ್ರಮದ ಆಹಾರ ಇಲಾಖೆಗೂ ಮಾಹಿತಿ ಕೊಡುತ್ತೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

