Dailyhunt Logo
  • Light mode
    Follow system
    Dark mode
    • Play Story
    • App Story
Odisha | ವೈದ್ಯಕೀಯ ಪಿಜಿ ಪರೀಕ್ಷೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ವಾಟ್ಸ್‌ಆಯಪ್ ನಲ್ಲಿ ಪ್ರಶ್ನೆ ಪತ್ರಿಕೆ ಹಂಚಿಕೆ; 'ಸೋರಿಕೆ ಅಲ್ಲ' ಎಂದ ವೈದ್ಯಕೀಯ ಕಾಲೇಜು

Odisha | ವೈದ್ಯಕೀಯ ಪಿಜಿ ಪರೀಕ್ಷೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ವಾಟ್ಸ್‌ಆಯಪ್ ನಲ್ಲಿ ಪ್ರಶ್ನೆ ಪತ್ರಿಕೆ ಹಂಚಿಕೆ; 'ಸೋರಿಕೆ ಅಲ್ಲ' ಎಂದ ವೈದ್ಯಕೀಯ ಕಾಲೇಜು

ಭುವನೇಶ್ವರ: ಒಡಿಶಾದ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೊಂದು ಪರೀಕ್ಷೆ ನಡೆಯುತ್ತಿದ್ದ ವೇಳೆಯಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ ಎನ್ನಲಾಗಿದ್ದು, ಈ ಸಂಬಂಧ ಆಂತರಿಕ ತನಿಖೆ ಪ್ರಾರಂಭಿಸಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜುಲೈ 27 ರಂದು ನಡೆದ ಆಲ್ ಒಡಿಶಾ ಮೆಡಿಕಲ್ ಪಿಜಿ ಪರೀಕ್ಷೆಯ ವೇಳೆ ಈ ಘಟನೆ ನಡೆದಿದೆ. ಎಂಎಸ್/ಎಂಡಿ 2023-26 ಬ್ಯಾಚ್ನ ಜನರಲ್ ಸರ್ಜರಿ ಪೇಪರ್-2 ಚಿತ್ರಗಳು ಕೆಲವು ಸ್ನಾತಕೋತ್ತರ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ಗಳಲ್ಲಿ ಹಂಚಿಕೊಳ್ಳಲಾಗಿತ್ತು ಎನ್ನಲಾಗಿದೆ.

ಜೊತೆಗೆ , ಪರೀಕ್ಷೆ ನಡೆಯುತ್ತಿದ್ದಾಗ ಕೆಲವು ಫೋನ್ ಸಂಖ್ಯೆಗಳಿಂದ ಉತ್ತರಗಳನ್ನೂ ರವಾನಿಸಲಾಗಿತ್ತು ಎಂಬ ಆರೋಪಗಳು ಕೇಳಿಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಶ್ನೆ ಪತ್ರಿಕೆಯ ಫೋಟೋಗಳನ್ನು ಹೊಂದಿದ್ದ ಭುವನೇಶ್ವರದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ. ಬೆರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿದ್ಯಾರ್ಥಿಯೊಬ್ಬರು ರಚಿಸಿದ್ದ ವಾಟ್ಸಾಪ್ ಗ್ರೂಪ್ ಮೂಲಕ ತನಗೆ ಈ ಚಿತ್ರಗಳು ಬಂದಿವೆ ಎಂದು ಆತನು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಬಳಿಕ , ಒಡಿಶಾ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಮಾನಸ್ ರಂಜನ್ ಸಾಹೂ ಅವರು ಪರೀಕ್ಷೆ ನಡೆದ ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ವರ್ಚುವಲ್ ಸಭೆ ನಡೆಸಿದ್ದಾರೆ. ಉಳಿದ ಪರೀಕ್ಷೆಗಳಿಗೆ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸುವಂತೆ ಉಪಕುಲಪತಿಗಳು ಸಂಸ್ಥೆಗಳಿಗೆ ಸೂಚಿಸಿದ್ದಾರೆ.

ಎಂಕೆಸಿಜಿ ವೈದ್ಯಕೀಯ ಕಾಲೇಜಿನ ಡೀನ್ ಹಾಗೂ ಪ್ರಾಂಶುಪಾಲ ಹರಿಕೃಷ್ಣ ದಲೈ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲ. ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಹೊರಬಂದು ವಿದ್ಯಾರ್ಥಿಗಳಿಗೆ ತಲುಪಿದ್ದರೆ ಅದನ್ನು ಸೋರಿಕೆ ಎನ್ನಬಹುದಿತ್ತು. ಆದರೆ, ಈ ಪ್ರಕರಣದಲ್ಲಿ ಪ್ರಶ್ನೆ ಪತ್ರಿಕೆಯು ಪರೀಕ್ಷಾ ಕೊಠಡಿಯಿಂದಲೇ ಹೊರಬಂದಿದೆ ಎಂದು ಹೇಳಿದ್ದಾರೆ.

"ನಿಯಮಿತ ತಪಾಸಣೆ ನಡೆಸುತ್ತಿದ್ದರೂ ಮತ್ತು ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ಗಳನ್ನು ನಿಷೇಧಿಸಿದ್ದರೂ ಇಂತಹ ಘಟನೆ ಕಂಡುಬಂದಿರುವುದು ನಮಗೆ ಆಶ್ಚರ್ಯ ತಂದಿದೆ. ಪ್ರಶ್ನೆ ಪತ್ರಿಕೆಯ ಚಿತ್ರಗಳನ್ನು ಹಂಚಿಕೊಳ್ಳಲು ಯಾವ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲಾಗಿದೆ ಎಂಬುದು ನಮಗೂ ಆಶ್ಚರ್ಯ ಹುಟ್ಟಿಸಿದೆ. ಪ್ರಶ್ನೆ ಪತ್ರಿಕೆಯನ್ನು ಹೇಗೆ ಫೋಟೋ ತೆಗೆಯಲಾಯಿತು ಮತ್ತು ಪರೀಕ್ಷಾ ಕೊಠಡಿಯೊಳಗೆ ಯಾವ ಸಾಧನವನ್ನು ಬಳಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಆಂತರಿಕ ತನಿಖೆ ನಡೆಯುತ್ತಿದೆ " ಎಂದು ಅವರು ತಿಳಿಸಿದ್ದಾರೆ.

2023-26 ಬ್ಯಾಚ್ನ ಲಿಖಿತ ಪರೀಕ್ಷೆಗಳು ಜುಲೈ 21 ರಂದು ಪ್ರಾರಂಭವಾಗಿದ್ದವು. ಉಳಿದ ಎರಡು ಪರೀಕ್ಷೆಗಳು ಆಗಸ್ಟ್ 1 ಮತ್ತು ಆಗಸ್ಟ್ 5 ರಂದು ನಡೆಯಲಿವೆ. ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಒಟ್ಟು 154 ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi