Dailyhunt Logo
  • Light mode
    Follow system
    Dark mode
    • Play Story
    • App Story
Pakistan ವಿರುದ್ಧ ಟೆಸ್ಟ್ ಸರಣಿ | ಕ್ಲೀನ್ ಸ್ವೀಪ್ ಗೈದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ

Pakistan ವಿರುದ್ಧ ಟೆಸ್ಟ್ ಸರಣಿ | ಕ್ಲೀನ್ ಸ್ವೀಪ್ ಗೈದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ

ಮೀರ್ಪುರ, ಮೇ 20: ಸಿಲ್ಹಟ್ ಇಂಟರ್ ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ಕೊನೆಗೊಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 78 ರನ್ ಗಳ ಅಂತರದಿಂದ ಸೋಲಿಸಿ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡು ಪ್ರಾಬಲ್ಯ ಮೆರೆದಿರುವ ಬಾಂಗ್ಲಾದೇಶ ತನ್ನ ಟೆಸ್ಟ್ ಕ್ರಿಕೆಟ್ ಪಯಣದಲ್ಲಿ ಮತ್ತೊಂದು ಸ್ಮರಣೀಯ ಅಧ್ಯಾಯ ಆರಂಭಿಸಿದೆ.

ಈ ಗೆಲುವಿನ ಮೂಲಕ ಬಾಂಗ್ಲಾದೇಶ ತಂಡವು ಪಾಕಿಸ್ತಾನದ ವಿರುದ್ಧ ಸತತ ಎರಡನೇ ಬಾರಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಗೈದಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಜಯಭೇರಿ ಬಾರಿಸಿದ್ದ ಆತಿಥೇಯ ತಂಡವು ಎರಡನೇ ಟೆಸ್ಟ್ನಲ್ಲಿ ಮತ್ತೊಮ್ಮೆ ಎಲ್ಲ ವಿಭಾಗಗಳಲ್ಲಿ ಪಾಕಿಸ್ತಾನ ತಂಡವನ್ನು ಹಿಮ್ಮೆಟ್ಟಿಸಿ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿ ಇತಿಹಾಸ ನಿರ್ಮಿಸಿದೆ.

ಸಿಲ್ಹಟ್ನ ಪಿಚ್ ನಲ್ಲಿ ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನ ತಂಡವು ಪರಿಪೂರ್ಣ ಆರಂಭ ಪಡೆದಿತ್ತು. ಮುಹಮ್ಮದ್ ಅಬ್ಬಾಸ್ ಆರಂಭಿಕ ಓವರ್ ನಲ್ಲಿ ಆಘಾತ ನೀಡಿದ್ದು, ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡವು 116 ರನ್ಗೆ ಆರು ವಿಕೆಟ್ ಕಳೆದುಕೊಂಡು ಕುಸಿತ ಕಂಡಿತ್ತು. ಬಾಂಗ್ಲಾ ತಂಡವು ಸಾಧಾರಣ ಮೊತ್ತದತ್ತ ಮುಖ ಮಾಡಿದ್ದಾಗ ಲಿಟನ್ ದಾಸ್ ಶತಕ ಗಳಿಸಿ ಇನಿಂಗ್ಸ್ಗೆ ಆಧಾರವಾಗಿದ್ದರು. ದಾಸ್ ಅವರ ನಿರ್ಭೀತಿಯ ಬ್ಯಾಟಿಂಗ್ ಬಲದಿಂದ ಬಾಂಗ್ಲಾದೇಶ ತಂಡವು ಮೊದಲ ಇನಿಂಗ್ಸ್ ನಲ್ಲಿ 278 ರನ್ ಗಳಿಸಿತ್ತು. ಖುರ್ರುಮ್ ಶಹಝಾದ್ ನಾಲ್ಕು ವಿಕೆಟ್ ಪಡೆದು ಮಿಂಚಿದರು.

ತಸ್ಕಿನ್ ಅಹ್ಮದ್ ಇಬ್ಬರು ಆರಂಭಿಕ ಆಟಗಾರರನ್ನು ಬೇಗನೆ ಪೆವಿಲಿಯನ್ ಗೆ ಕಳುಹಿಸಿ ಪಾಕಿಸ್ತಾನ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಬಾಬರ್ ಆಝಂ (68 ರನ್) ಮರು ಹೋರಾಟ ನೀಡಿದರೂ ಪಾಕಿಸ್ತಾನದ ಮಧ್ಯಮ ಸರದಿಯು ಮತ್ತೊಮ್ಮೆ ಕುಸಿತ ಕಂಡಿತು. ಬಾಂಗ್ಲಾದೇಶದ ಸ್ಪಿನ್ನರ್ಗಳು ಬಿಗಿ ಬೌಲಿಂಗ್ ಮಾಡಿ ಪಾಕಿಸ್ತಾನ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 230 ರನ್ಗೆ ನಿಯಂತ್ರಿಸಿದರು. ಬಾಂಗ್ಲಾದೇಶ ತಂಡವು ಮೊದಲ ಇನಿಂಗ್ಸ್ನಲ್ಲಿ 46 ರನ್ ಮುನ್ನಡೆ ಪಡೆಯಿತು.

ಬಾಂಗ್ಲಾದೇಶ ತಂಡವು ತನ್ನ ಎರಡನೇ ಇನಿಂಗ್ಸ್ನಲ್ಲಿ ಮುನ್ನಡೆಯ ಸಂಪೂರ್ಣ ಲಾಭ ಪಡೆಯಿತು. ಹಿರಿಯ ಬ್ಯಾಟರ್ ಮುಶ್ಫಿಕುರ್ ರಹೀಂ 137 ರನ್ ಗಳಿಸಿ ತಮ್ಮ 14ನೇ ಟೆಸ್ಟ್ ಶತಕ ಪೂರೈಸಿದರು. ಲಿಟನ್ ದಾಸ್ ತಮ್ಮ ಶ್ರೇಷ್ಠ ಫಾರ್ಮ್ ಮುಂದುವರಿಸಿ 69 ರನ್ ಕಲೆ ಹಾಕಿದರು. ಅಗ್ರ ಸರದಿಯಲ್ಲಿ ಮಹ್ಮೂದುಲ್ ಹಸನ್ ಅರ್ಧಶತಕ ಗಳಿಸಿದರು. ಅಂತಿಮವಾಗಿ ಬಾಂಗ್ಲಾದೇಶ ತಂಡವು ಪಾಕಿಸ್ತಾನ ತಂಡದ ಗೆಲುವಿಗೆ 437 ರನ್ ಗುರಿ ನೀಡಿತು.

ಪಾಕಿಸ್ತಾನ ತಂಡವು ರನ್ ಚೇಸ್ ವೇಳೆ ಸಾಧಾರಣ ಆರಂಭ ಪಡೆಯಿತು. ನಾಯಕ ಶಾನ್ ಮಸೂದ್ ಹಾಗೂ ಬಾಬರ್ ಆಝಂ ಸ್ಪೂರ್ತಿದಾಯಕ ಹೋರಾಟ ನೀಡಿದರು. ಶಾನ್ 71 ರನ್ ಗಳಿಸಿದರೆ, ಬಾಬರ್ 47 ರನ್ ಕೊಡುಗೆ ನೀಡಿದರು. ಬಾಂಗ್ಲಾದೇಶದ ಸ್ಪಿನ್ನರ್ ತೈಜುಲ್ ಇಸ್ಲಾಂ ನೆಲೆ ನಿಂತಿದ್ದ ಇಬ್ಬರೂ ಬ್ಯಾಟರ್ಗಳ ವಿಕೆಟ್ ಪಡೆದು ಮತ್ತೊಮ್ಮೆ ಹಿಡಿತ ಸಾಧಿಸಿದರು.

ಪಾಕಿಸ್ತಾನ ತಂಡ ಸುಲಭವಾಗಿ ಶರಣಾಗಲು ನಿರಾಕರಿಸಿದ್ದು, ಮುಹಮ್ಮದ್ ರಿಝ್ವಾನ್ ಹಾಗೂ ಸಲ್ಮಾನ್ ಅಲಿ 134 ರನ್ ಜೊತೆಯಾಟ ನಡೆಸಿದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ 71 ರನ್ ಗಳಿಸಿದ್ದ ಸಲ್ಮಾನ್ ಅವರು ತೈಜುಲ್ಗೆ ವಿಕೆಟ್ ಒಪ್ಪಿಸಿದರು. ರಿಝ್ವಾನ್ ಔಟಾಗದೆ 75 ರನ್ ಗಳಿಸಿದ್ದರು.

ಕೊನೆಯ ದಿನವಾದ ಬುಧವಾರ 7 ವಿಕೆಟ್ಗಳ ನಷ್ಟಕ್ಕೆ 316 ರನ್ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಪಾಕಿಸ್ತಾನ ತಂಡದ ಪರ ರಿಝ್ವಾನ್ ಹಾಗೂ ಸಾಜಿದ್ ಖಾನ್ ಕ್ಷಿಪ್ರವಾಗಿ ರನ್ ಗಳಿಸಲು ಮುಂದಾದರು. ಆದರೆ ಬಾಂಗ್ಲಾದೇಶದ ನಾಯಕ ನಜ್ಮುಲ್ ಹುಸೇನ್ ಅವರು ತೈಜುಲ್ ಇಸ್ಲಾಂರನ್ನು ಮತ್ತೊಮ್ಮೆ ದಾಳಿಗಿಳಿಸಿ ನಿರ್ಣಾಯಕ ತಂತ್ರ ರೂಪಿಸಿದರು. ಎಡಗೈ ಸ್ಪಿನ್ನರ್ ಇಸ್ಲಾಂ, ಸಾಜಿದ್ ಖಾನ್ (28 ರನ್) ವಿಕೆಟ್ ಉರುಳಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 18ನೇ ಐದು ವಿಕೆಟ್ ಗೊಂಚಲು ಪೂರೈಸಿದರು.

ಆ ನಂತರ ರಿಝ್ವಾನ್ ಅವರ ವೀರೋಚಿತ ಇನಿಂಗ್ಸ್ಗೆ ತೆರೆ ಬಿತ್ತು. ಅವರು 166 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 94 ರನ್ ಗಳಿಸಿ ಶರೀಫುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿ ಶತಕ ವಂಚಿತರಾದರು. ಖುರ್ರುಮ್ ಶಹಝಾದ್ (0) ವಿಕೆಟ್ ಪಡೆದ ತೈಜುಲ್, ಪಾಕಿಸ್ತಾನ ತಂಡದ ಇನಿಂಗ್ಸ್ಗೆ ತೆರೆ ಎಳೆದರು. ಈ ಮೂಲಕ 120 ರನ್ಗೆ ಆರು ವಿಕೆಟ್ ಪಡೆದರು. ಪಂದ್ಯದಲ್ಲಿ ಒಟ್ಟು 9 ವಿಕೆಟ್ ಉರುಳಿಸಿದರು.

ಬಾಂಗ್ಲಾದೇಶ ತಂಡವು ಪಾಕಿಸ್ತಾನ ತಂಡವನ್ನು ಎರಡನೇ ಇನಿಂಗ್ಸ್ನಲ್ಲಿ 358 ರನ್ಗೆ ನಿಯಂತ್ರಿಸಿ 78 ರನ್ಗಳ ಗೆಲುವು ದಾಖಲಿಸಿತು. ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು.

ಎರಡನೇ ಟೆಸ್ಟ್ನಲ್ಲಿ 126 ಹಾಗೂ 69 ರನ್ ಗಳಿಸಿದ ಲಿಟನ್ ದಾಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಒಟ್ಟು 253 ರನ್ ಕಲೆ ಹಾಕಿದ್ದ ಮುಶ್ಫಿಕುರ್ ರಹೀಂ 'ಸರಣಿಶ್ರೇಷ್ಠ' ಪ್ರಶಸ್ತಿ ಪಡೆದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi