ಕೋಲ್ಕತಾ: ವಿಧಾನಸಭಾ ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ದಾರಿ ಮಾಡಿಕೊಡುವುದಕ್ಕಾಗಿ ರಾಜ್ಯದಲ್ಲಿ ಅಶಾಂತಿಯನ್ನು ಕದಡುವ 'ಸಂಚಿನ ನೀಲನಕ್ಷೆಯೊಂದನ್ನು' ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿದ್ಧಪಡಿಸುತ್ತಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ.
ಮಾಲ್ಡದಲ್ಲಿ ನ್ಯಾಯಾಂಗ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ ಘಟನೆಗೆ ಬಿಜೆಪಿ ಮತ್ತು ಚುನಾವಣಾ ಆಯೋಗವೇ ನೇರ ಹೊಣೆ ಎಂದು ಅವರು ಆರೋಪಿಸಿದರು.
ಮುರ್ಷಿದಾಬಾದ್ ಜಿಲ್ಲೆಯ ಸಗರ್ಡಿಗಿ ಮತ್ತು ಸುತಿ ಎಂಬಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ''ಗಲಭೆ ಎಬ್ಬಿಸುವ ಬಿಜೆಪಿಯ ಸಂಚಿಗೆ'' ಬಲಿಯಾಗಬೇಡಿ ಎಂದು ಜನರಿಗೆ ಮನವಿ ಮಾಡಿದರು. ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವ ತನ್ನ ಕಾರ್ಯದಲ್ಲಿ ಚುನಾವಣಾ ಆಯೋಗವು ವಿಫಲವಾಗಿದೆ ಎಂದು ಅವರು ಆರೋಪಿಸಿದರು.
''ನನ್ನ ಅಧಿಕಾರಗಳನ್ನು ಕಿತ್ತುಕೊಳ್ಳಲಾಗಿದೆ ಹಾಗೂ ಪಶ್ಚಿಮ ಬಂಗಾಳಕ್ಕೆ ಅಪಖ್ಯಾತಿ ತರಲಾಗಿದೆ. ಮಾಲ್ಡ ಘಟನೆಯ ಬಗ್ಗೆ ಸರಕಾರದ ಯಾರೊಬ್ಬರೂ ನನಗೆ ಮಾಹಿತಿ ನೀಡಿಲ್ಲ. ಚುನಾವಣಾ ಆಯೋಗವು ನನ್ನ ಅಧಿಕಾರಗಳನ್ನು ಕಿತ್ತುಕೊಂಡಿರುವ ಹೊರತಾಗಿಯೂ ನಾನು ರಾಜಕೀಯವಾಗಿ ಹೋರಾಡುತ್ತಿದ್ದೇನೆ'' ಎಂದು ಮಮತಾ ಹೇಳಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ವೇಳೆ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿದ್ದ ಏಳು ನ್ಯಾಯಾಂಗ ಅಧಿಕಾರಿಗಳು ಮುತ್ತಿಗೆಗೆ ಒಳಗಾಗಿರುವ ಘಟನೆಯ ಬಗ್ಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

