ಹೊಸದಿಲ್ಲಿ: ಪಶ್ಚಿಮ ಏಶ್ಯಾ ಸಂಘರ್ಷದಿಂದಾಗಿ ಉಂಟಾಗಿರುವ ಪೂರೈಕೆ ಅಡಚಣೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಗುರುವಾರ ಸುಮಾರು 40 ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಜೂ.30ರವರೆಗೆ ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ.
ದೇಶೀಯ ಕೈಗಾರಿಕೆಗಳಿಗೆ ಪ್ರಮುಖ ಪೆಟ್ರೋಕೆಮಿಕಲ್ ಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಉತ್ಪಾದನಾ ವಲಯದ ವೆಚ್ಚಗಳನ್ನು ತಗ್ಗಿಸಲು ಮತ್ತು ದೇಶದಲ್ಲಿ ಪೂರೈಕೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ತಾತ್ಕಾಲಿಕ ಕ್ರಮವಾಗಿ ಈ ವಿನಾಯಿತಿಯನ್ನು ಘೋಷಿಸಲಾಗಿದೆ ಎಂದು ವಿತ್ತ ಸಚಿವಾಲಯವು ತಿಳಿಸಿದೆ.
ವಿನಾಯಿತಿ ಘೋಷಿಸಲ್ಪಟ್ಟಿರುವ ಉತ್ಪನ್ನಗಳಲ್ಲಿ ಪಾಲಿಪ್ರೊಪಿಲೀನ್, ಪಾಲಿಸ್ಟೈರೀನ್,ಪಾಲಿಯಾಲ್ಸ್,ಪಾಲಿಬ್ಯುಟಾಡೀನ್ ಮತ್ತು ಅನಹೈಡ್ರಸ್ ಅಮೋನಿಯಾ ಸೇರಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ದ್ರವೀಕೃತ ಪೆಟ್ರೋಲಿಯಂ ಅನಿಲ ಮತ್ತು ಈಥೇನ್ ಬಳಸಿ ಕೆಲವು ಪೆಟ್ರೋಕೆಮಿಕಲ್ ಉತ್ಪನ್ನಗಳು ಸ್ಥಳೀಯವಾಗಿ ತಯಾರಾಗುತ್ತಿದ್ದರೂ ಭಾರತವು ಪ್ರಮುಖವಾಗಿ ಆಮದುಗಳ ಮೇಲೆಯೇ ಅವಲಂಬಿತವಾಗಿದೆ.
ಗುರುವಾರ ಘೋಷಿಸಲಾದ ವಿನಾಯಿತಿಯಿಂದ ಪ್ಲಾಸ್ಟಿಕ್, ಪ್ಯಾಕೇಜಿಂಗ್, ಜವಳಿ, ಔಷಧಿ, ರಾಸಾಯನಿಕಗಳು, ವಾಹನ ಬಿಡಿಭಾಗಗಳು ಮತ್ತು ಇತರ ತಯಾರಿಕಾ ಕ್ಷೇತ್ರಗಳಿಗೆ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

