Thursday, 26 Aug, 5.09 pm ವಾರ್ತಾಭಾರತಿ

ಮುಖಪುಟ
ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಾಗುತ್ತಿರುವುದು ಆತಂಕಕಾರಿ ಪ್ರವೃತ್ತಿಯಾಗಿದೆ: ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಆ.26: ದೇಶದಲ್ಲಿಂದು ಪೊಲೀಸ್ ಅಧಿಕಾರಿಗಳು ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಕೈಗೊಂಬೆಗಳಾಗುತ್ತಿರುವ ಆತಂತಕಾರಿ ಪ್ರವೃತ್ತಿ ಮನೆ ಮಾಡಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಹೇಳಿದೆ.

ಇದೇ ಕಾರಣದಿಂದ ಹೊಸಪಕ್ಷವು ಅಧಿಕಾರಕ್ಕೆ ಬಂದಾಗ ಅಂತಹ ಅಧಿಕಾರಿಗಳ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುತ್ತದೆ. ಇದೊಂದು ಹೊಸ ಪ್ರವೃತ್ತಿಯಾಗಿದ್ದು,ಇದನ್ನು ನಿಲ್ಲಿಸುವ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ಪೀಠವು ಹೇಳಿತು.

ಛತ್ತೀಸ್ಗಡ ಪೊಲೀಸರು ತನ್ನ ವಿರುದ್ಧ ದಾಖಲಿಸಿರುವ ದೇಶದ್ರೋಹ ಪ್ರಕರಣದಲ್ಲಿ ರಕ್ಷಣೆಯನ್ನು ಕೋರಿ ಅಮಾನತುಗೊಂಡಿರುವ ಐಪಿಎಸ್ ಅಧಿಕಾರಿ ಗುರ್ಜಿಂದರ್ ಪಾಲ್ ಸಿಂಗ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ರಾಜ್ಯದಲ್ಲಿ ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ.

ಜುಲೈನಲ್ಲಿ ಸಿಂಗ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಛತ್ತೀಸ್ಗಡ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ) ಮತ್ತು ಆರ್ಥಿಕ ಅಪರಾಧಗಳ ಘಟಕದ ಅಧಿಕಾರಿಗಳು, ಸಿಂಗ್ ಸರಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಸಂಚಿನಲ್ಲಿ ಶಾಮೀಲಾಗಿದ್ದನ್ನು ತೋರಿಸುವ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ್ದರು.

ದಾಳಿ ಸಂದರ್ಭಗಳಲ್ಲಿ ಸುಮಾರು 10 ಕೋ.ರೂ.ವೌಲ್ಯದ ಆಸ್ತಿಗಳೂ ಪತ್ತೆಯಾಗಿದ್ದು,ಸಿಂಗ್ ಬೇನಾಮಿ ವಹಿವಾಟುಗಳ ಮೂಲಕ ಅವುಗಳನ್ನು ಗಳಿಸಿದ್ದಾರೆ ಎಂದೂ ಅಧಿಕಾರಿಗಳು ಆರೋಪಿಸಿದ್ದರು.

ತಾನು ಹಿಂದಿನ ಬಿಜೆಪಿ ಸರಕಾರದೊಂದಿಗೆ ನಿಕಟವಾಗಿದ್ದೆ ಎಂದು ನಂಬಿರುವುದರಿಂದ ರಾಜ್ಯದ ಕಾಂಗ್ರೆಸ್ ಸರಕಾರವು ತನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆಪಾದಿಸಿರುವ ಸಿಂಗ್, ತನ್ನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕಳೆದ ಜುಲೈನಲ್ಲಿ ಛತ್ತೀಸ್ಗಡ ಉಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದರು. ಆದರೆ ಅದು ನಿರಾಕರಿಸಿದ್ದರಿಂದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲನ್ನೇರಿದ್ದಾರೆ. ಗುರುವಾರ ನಾಲ್ಕು ವಾರಗಳ ಅವಧಿಗೆ ಸಿಂಗ್ ಅವರಿಗೆ ಬಂಧನದ ವಿರುದ್ಧ ರಕ್ಷಣೆಯನ್ನು ನೀಡಿರುವ ಸರ್ವೋಚ್ಚ ನ್ಯಾಯಾಲಯವು ಉತ್ತರ ಕೋರಿ ಛತ್ತೀಸ್ಗಡ ಸರಕಾರಕ್ಕೆ ನೋಟಿಸ್ ಹೊರಡಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top