Dailyhunt Logo
  • Light mode
    Follow system
    Dark mode
    • Play Story
    • App Story
ಪ್ಯಾರಾ ಬ್ಯಾಡ್ಮಿಂಟನ್| ನಿತೇಶ್, ನವೀನ್‌ಗೆ ಚಿನ್ನ

ಪ್ಯಾರಾ ಬ್ಯಾಡ್ಮಿಂಟನ್| ನಿತೇಶ್, ನವೀನ್‌ಗೆ ಚಿನ್ನ

ನಗೋಯ: ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭಾರತವು ಶುಕ್ರವಾರ ಯಶಸ್ವಿ ಪ್ರದರ್ಶನ ನೀಡಿದೆ. ನಿತೇಶ್ ಕುಮಾರ್ ಹಾಗೂ ನವೀನ್ ಶಿವಕುಮಾರ್ ಪುರುಷರ ಸಿಂಗಲ್ಸ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ತುಳಸಿಮತಿ ಮುರುಗೇಶನ್ ಹಾಗೂ ನಿತ್ಯಾ ಶ್ರೀ ಸುಮತಿ ಸಿವಾನ್ ಫೈನಲ್ ಪಂದ್ಯಗಳಲ್ಲಿ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ನಿತೇಶ್ ತಮ್ಮದೇ ದೇಶದ ಹಾಗೂ ಎರಡು ಬಾರಿ ಏಶ್ಯನ್ ಪ್ಯಾರಾ ಗೇಮ್ಸ್ ಚಾಂಪಿಯನ್ ಆಗಿರುವ ಪ್ರಮೋದ್ ಭಗತ್‌ರನ್ನು ಪುರುಷರ ಸಿಂಗಲ್ಸ್ ಎಸ್‌ಎಲ್‌3 ಫೈನಲ್‌ನಲ್ಲಿ 21-18, 21-16 ಅಂತರದಿಂದ ಮಣಿಸಿದರು. ಈ ಇಬ್ಬರು ಆಟಗಾರರು ಪ್ಯಾರಾಲಿಂಪಿಕ್ಸ್ ಚಾಂಪಿಯನ್‌ಗಳಾಗಿದ್ದು, ಏಶ್ಯನ್ ಗೇಮ್ಸ್ ಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾದರು.

ಈ ಹಿಂದಿನ ಆವೃತ್ತಿಯಲ್ಲಿ ಚಿನ್ನದ ಪದಕದಿಂದ ವಂಚಿತರಾಗಿರುವ ನನಗೆ ಈ ಗೆಲುವು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ನಿತೇಶ್ ಹೇಳಿದ್ದಾರೆ.

36 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಎಸ್‌ಎಲ್‌4 ಫೈನಲ್‌ನಲ್ಲಿ ಇಂಡೋನೇಶ್ಯದ ಫ್ರೆಡಿ ಸೆಟಿಯವಾನ್‌ರನ್ನು 21-9, 21-17 ಗೇಮ್‌ಗಳ ಅಂತರದಿಂದ ಮಣಿಸಿರುವ ನವೀನ್ ಶಿವಕುಮಾರ್ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಮತ್ತೊಂದು ಚಿನ್ನದ ಪದಕ ಗೆದ್ದುಕೊಟ್ಟರು.

2018 ಹಾಗೂ 2022ರ ಆವೃತ್ತಿಗಳಲ್ಲಿ ಚಿನ್ನದ ಪದಕ ಜಯಿಸಿದ್ದ ಪ್ರಮೋದ್ ಭಗತ್ ಸತತ ಮೂರನೇ ಪ್ರಶಸ್ತಿ ಕೈತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

''ನಾನು ಏಶ್ಯನ್ ಗೇಮ್ಸ್‌ನಲ್ಲಿ ಸತತ ಎರಡು ಸಲ ಚಿನ್ನ ಗೆದ್ದಿರುವ ಕಾರಣ ಈ ಫಲಿತಾಂಶವು ನನಗೆ ಬೇಸರ ತರಿಸಿದೆ. ನಾನು ಮೂರನೇ ಚಿನ್ನ ಗೆಲ್ಲಲು ಯತ್ನಿಸಿದ್ದೇನೆ. ನನ್ನ ಕೆಲವೊಂದು ಹೊಡೆತಗಳು ತಪ್ಪಾದವು. ಹೀಗಾಗಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು'' ಎಂದು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಪ್ರಮೋದ್ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi