Friday, 23 Apr, 12.09 am ವಾರ್ತಾಭಾರತಿ

ರಾಷ್ಟೀಯ
ರೈತರು ನಮ್ಮನ್ನು ತಡೆಯಲಿಲ್ಲ: ದಿಲ್ಲಿ ಆಸ್ಪತ್ರೆಗೆ ಆಮ್ಲಜನಕವನ್ನು ಸಾಗಿಸಿದ ವಾಹನ ಚಾಲಕನ ಸ್ಪಷ್ಟನೆ

ಹೊಸದಿಲ್ಲಿ: ದಿಲ್ಲಿ ಗಡಿಯಲ್ಲಿ ಪ್ರತಿಭಟನಾನಿರತ ರೈತರು ಆಮ್ಲಜನಕ ಟ್ಯಾಂಕರ್‌ಗಳನ್ನು ನಗರಕ್ಕೆ ತಲುಪದಂತೆ ತಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ನಂತರ ಅಮ್ಲಜನಕ ವಾಹನದ ಚಾಲಕನೊಬ್ಬ ಈ ಕುರಿತು ಸ್ಪಷ್ಟನೆ ನೀಡಿದ್ದು, ನಾನು ಅಂತಹ ಯಾವುದೇ ಅಡೆತಡೆಗಳನ್ನು ಎದುರಿಸಲಿಲ್ಲ ಎಂದು ಹೇಳಿದ್ದಾರೆ. ಚಾಲಕನ ಹೇಳಿಕೆಯ ವೀಡಿಯೊವನ್ನು ಪತ್ರಕರ್ತ ಹೇಮಂತ್ ರಾಜೌರಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಮೋದಿನಗರದಿಂದ ಉತ್ತರ ದಿಲ್ಲಿಯ ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ವೈದ್ಯಕೀಯ ಆಕ್ಸಿಜನ್ ಸರಬರಾಜಿಗೆ ಸುಮಾರು ಎರಡು ಗಂಟೆ ಬೇಕಾಯಿತು. ಪ್ರತಿಭಟನೆಯು ಭರದಿಂದ ಸಾಗುತ್ತಿರುವಾಗ, ಅದೇ ಮಾರ್ಗದಲ್ಲಿ ನಮಗೆ ಸಾಗಲು ಐದು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ ಏಕೆಂದರೆ ನಾವು ಬಳಸು ದಾರಿಯನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಪೊಲೀಸರು ನಿನ್ನೆ ನಮ್ಮ ಹಾದಿಯನ್ನು ತೆರವುಗೊಳಿಸಿದ್ದಾರೆ. ಗಾಝಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ನಮಗೆ ತಡೆಯಾಗಲಿಲ್ಲ 'ಎಂದು ಚಾಲಕ ಹೇಳಿದರು. ಚಾಲಕ ಮಂಗಳವಾರ ರಾತ್ರಿ ಜಿಟಿಬಿ ಆಸ್ಪತ್ರೆಯಲ್ಲಿ ಆಮ್ಲಜನಕದ ತುರ್ತು ಅಗತ್ಯವನ್ನು ಪೂರೈಸುತ್ತಿದ್ದರು.

ಸೆಪ್ಟೆಂಬರ್ 2020 ರಲ್ಲಿ ಸಂಸತ್ತು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರೈತರು 2020 ರ ನವೆಂಬರ್‌ನಿಂದ ದಿಲ್ಲಿ ಗಡಿಯಲ್ಲಿ ಬೀಡುಬಿಟ್ಟಿದ್ದಾರೆ.

ಪ್ರತಿಭಟನಾಕಾರರು ಯಾವುದೇ ಅಗತ್ಯ ಸಾಮಗ್ರಿಗಳ ಸಾಗಣೆಗೆ ಅಡ್ಡಿಯಾಗಿಲ್ಲ ಮತ್ತು ಆಮ್ಲಜನಕ ಟ್ಯಾಂಕರ್‌ಗಳನ್ನು ರೈತರು ತಡೆದಿದ್ದಾರೆ ಎಂಬ ಆರೋಪವು 'ರಾಜಕೀಯ ಮತ್ತು ಪ್ರತಿಭಟನೆಗೆ ಅಪಖ್ಯಾತಿ ತರುವ ಪ್ರಯತ್ನವಾಗಿದೆ'' ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top