Dailyhunt Logo
  • Light mode
    Follow system
    Dark mode
    • Play Story
    • App Story
ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ನಿಧನ

ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ನಿಧನ

ಸಾಗರ : ರಂಗ ನಿರ್ದೇಶಕ ಚಿದಂಬರರಾವ್ ಜಂಬೆ (77) ಅವರು ಶನಿವಾರ ನಿಧನರಾದರು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ತಾಲೂಕಿನ ಅಡ್ಡೇರಿ ಗ್ರಾಮದ ಚಿದಂಬರರಾವ್ ಜಂಬೆ ಅವರು ಹೆಗ್ಗೋಡಿನ ತಮ್ಮ ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಕೆಳದಿ, ಸಾಗರದಲ್ಲಿ ಶಿಕ್ಷಣ ಪಡೆದ ಅವರು ಉಡುಪಿಯ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು.

1980ರ ದಶಕದ ಆರಂಭದಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ಪ್ರವೇಶ ಪಡೆದು ರಂಗಶಿಕ್ಷಣ ಪಡೆದ ಅವರು, ಬಳಿಕ ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ತಮ್ಮ ರಂಗಕಾಯಕ ಆರಂಭಿಸಿದರು. ಕೆ.ವಿ.ಸುಬ್ಬಣ್ಣ ಅವರ ಮಾರ್ಗದರ್ಶನದಲ್ಲಿ ಸುಮಾರು 22 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.

ಮೈಸೂರಿನ ರಂಗಾಯಣದ ನಿರ್ದೇಶಕರಾಗಿ, ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ಮುಖ್ಯಸ್ಥರಾಗಿ ಹಾಗೂ ಸಾಣೆಹಳ್ಳಿಯ ರಂಗ ತರಬೇತಿ ಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. 'ಚೆರ್ರಿ ಹಣ್ಣಿನ ತೋಟ', 'ಚಾಣಕ್ಯ ಪ್ರಪಂಚ', 'ಆ ಊರು-ಈ ಊರು', 'ಲೋಕ ಶಾಕುಂತಲ', 'ತಲೆದಂಡ', 'ಈ ಕೆಳಗಿನವರು' ಸೇರಿದಂತೆ 100ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದರು. ನೀನಾಸಮ್ ಜನಸ್ಪಂದನ ಯೋಜನೆಯಡಿ ಸಿದ್ದಿ ಜನಾಂಗದವರಿಗಾಗಿ 'ಕಪ್ಪು ಜನ, ಕೆಂಪು ನೆರಳು' ನಾಟಕ ನಿರ್ದೇಶಿಸಿ ಗಮನ ಸೆಳೆದಿದ್ದರು.

ಸಾಣೆಹಳ್ಳಿಯ ಶಿವಸಂಚಾರದ ರಂಗಶಾಲೆಯ ನಿರ್ಮಾಣದಲ್ಲಿಯೂ ಪ್ರಮುಖವಾಗಿ ತೊಡಗಿಸಿಕೊಂಡಿದ್ದ ಅವರು ಹಲವು ತಲೆಮಾರಿನ ರಂಗಕರ್ಮಿಗಳಿಗೆ ಮಾರ್ಗದರ್ಶಕರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಜ್ಯ ಮತ್ತು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi