Dailyhunt
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ರಾಣಾ ಅಯ್ಯೂಬ್ ವಿರುದ್ಧ ಕ್ರಮಕ್ಕೆ ದಿಲ್ಲಿ ಹೈಕೋರ್ಟ್ ಸೂಚನೆ

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ರಾಣಾ ಅಯ್ಯೂಬ್ ವಿರುದ್ಧ ಕ್ರಮಕ್ಕೆ ದಿಲ್ಲಿ ಹೈಕೋರ್ಟ್ ಸೂಚನೆ

ಹೊಸದಿಲ್ಲಿ: ಪತ್ರಕರ್ತೆ ರಾಣಾ ಅಯ್ಯೂಬ್ ಅವರ 'ಎಕ್ಸ್' ಖಾತೆಯಲ್ಲಿ ಪ್ರಕಟವಾದ ಕೆಲ ಟ್ವೀಟ್‌ ಗಳು ಹಿಂದೂ ದೇವತೆಗಳನ್ನು ಅವಹೇಳನ ಮಾಡುವಂತಿದ್ದು, ಭಾರತ ವಿರೋಧಿ ಭಾವನೆಗಳನ್ನು ಪ್ರಚೋದಿಸುತ್ತವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಅವುಗಳ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಬುಧವಾರ ಸೂಚಿಸಿದೆ.

ಅಮಿತಾ ಸಚ್‌ದೇವಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರ ಪೀಠ, ಪ್ರಶ್ನಾರ್ಹ ಟ್ವೀಟ್‌ ಗಳು ಅವಹೇಳನಕಾರಿ, ಪ್ರಚೋದನಕಾರಿ ಹಾಗೂ ಕೋಮು ಸೂಕ್ಷ್ಮತೆಯನ್ನು ಹಾನಿಗೊಳಿಸುವ ಸ್ವರೂಪದಲ್ಲಿವೆ ಎಂದು ಅಭಿಪ್ರಾಯಪಟ್ಟಿತು.

ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ, ಎಕ್ಸ್ ಕಾರ್ಪ್, ದಿಲ್ಲಿ ಪೊಲೀಸರು ಹಾಗೂ ರಾಣಾ ಅಯ್ಯೂಬ್ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದು, ನಾಳೆಯೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಪ್ರಕರಣ ತುರ್ತು ಸ್ವರೂಪದ್ದಾಗಿರುವುದರಿಂದ, ಸಂಬಂಧಿತ ದಾಖಲೆಗಳನ್ನು ಎಕ್ಸ್‌ ಗೆ ಕಳುಹಿಸುವಂತೆ ದಿಲ್ಲಿ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.

ಅವಮಾನಕಾರಿ ಮತ್ತು ಪ್ರಚೋದನಕಾರಿ ಟ್ವೀಟ್‌ ಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಅಗತ್ಯವಾಗಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಫ್‌ಐಆರ್ ದಾಖಲಿಸಲು ಸೂಚಿಸಲಾಗಿದೆ ಎಂದು ಪೀಠ ತಿಳಿಸಿದೆ.

ಅರ್ಜಿದಾರರಾದ ಅಮಿತಾ ಸಚ್‌ ದೇವಾ, 2013ರಿಂದ 2017ರ ಅವಧಿಯಲ್ಲಿ ಪ್ರಕಟವಾದ ಆರು ಟ್ವೀಟ್‌ ಗಳು ಹಿಂದೂ ದೇವತೆಗಳನ್ನು ಅವಮಾನಿಸುವಂತಿದ್ದು, ಸಾವರ್ಕರ್ ಹಾಗೂ ಭಾರತೀಯ ಸೇನೆಯ ಮಾನಹಾನಿಗೂ ಕಾರಣವಾಗಿವೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಸಚ್‌ ದೇವಾ ಅವರು ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್‌ ನಲ್ಲಿ ದೂರು ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ, 295ಎ ಮತ್ತು 505 ಅಡಿಯಲ್ಲಿ ಪ್ರಾಥಮಿಕ ಅಪರಾಧ ತೋರುತ್ತದೆ ಎಂದು ಹೇಳಿ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು.

ಇದೀಗ ಹೈಕೋರ್ಟ್‌ ಗೆ ಸಲ್ಲಿಸಿದ ಹೊಸ ಅರ್ಜಿಯಲ್ಲಿ, ಆಕ್ಷೇಪಾರ್ಹ ಟ್ವೀಟ್‌ ಗಳನ್ನು ತಕ್ಷಣ ಅಳಿಸುವಂತೆ ಕೋರಲಾಗಿದ್ದು, ಅವು ಇನ್ನೂ ಸಾರ್ವಜನಿಕವಾಗಿ ಲಭ್ಯವಿದ್ದು ಧಾರ್ಮಿಕ ಭಾವನೆಗಳಿಗೆ ಹಾನಿ ಉಂಟುಮಾಡುವುದರ ಜೊತೆಗೆ ಕೋಮು ಸಾಮರಸ್ಯಕ್ಕೂ ಧಕ್ಕೆಯಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಎಕ್ಸ್‌ ನ ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು ಸಂಪರ್ಕಿಸಿದರೂ, ಪ್ರಕರಣ ನ್ಯಾಯಾಲಯದಲ್ಲಿ ಬಾಕಿಯಿರುವ ಕಾರಣ, ಮನವಿಯನ್ನು ಪುರಸ್ಕರಿಸದೆ ನಿರಾಕರಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕಳೆದ ಮೇ ತಿಂಗಳಲ್ಲಿ ದಿಲ್ಲಿ ಪೊಲೀಸರು ಸಲ್ಲಿಸಿದ ವರದಿಯಲ್ಲಿ, ರಾಣಾ ಅಯ್ಯೂಬ್ ಅವರ ಎಕ್ಸ್ ಖಾತೆ ಹಾಗೂ ಸಂಬಂಧಿತ ಟ್ವೀಟ್‌ಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಲಾಗಿತ್ತು. ಕೆಲವು ಪೋಸ್ಟ್‌ಗಳು ಈಗ ಲಭ್ಯವಿಲ್ಲವೆಂದೂ ಉಲ್ಲೇಖಿಸಲಾಗಿತ್ತು.

ದೂರಿನ ಮೇಲೆ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿದೆ ಎಂದು ಆರೋಪಿಸಿದ ಸಚ್‌ ದೇವಾ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 156(3) ಅಡಿಯಲ್ಲಿ ಅರ್ಜಿ ಸಲ್ಲಿಸಿ, ಅಯ್ಯೂಬ್ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ನಿರ್ದೇಶಿಸುವಂತೆ ಕೋರಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi