ಪುಣೆ: ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಪ್ರಕರಣದ ವಿಚಾರಣೆ ವೇಳೆ ಪುಣೆಯ ವಿಶೇಷ ನ್ಯಾಯಾಲಯದಲ್ಲಿ ವಿನಾಯಕ ದಾಮೋದರ ಸಾವರ್ಕರ್ ದೇವರ ಅಸ್ತಿತ್ವ ಮತ್ತು ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿ ಪುಸ್ತಕ ಬರೆದಿದ್ದಾರೆ ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಕೊಂಡಿದ್ದಾರೆ ಎಂದು livelaw.in ವರದಿ ಮಾಡಿದೆ.
ವರದಿ ಪ್ರಕಾರ, ಸಾವರ್ಕರ್ ʼಸಾವರ್ಕರಾಂಚೆ ವಿಶ್ವಜ್ಞಾನ ವಿನಬಂಧʼ (ಸಾವರ್ಕರ್ ಅವರ ವಿಜ್ಞಾನ ಆಧಾರಿತ ಪ್ರಬಂಧಗಳು) ಎಂಬ ವಿವಾದಾತ್ಮಕ ಪುಸ್ತಕವನ್ನು ಬರೆದಿರುವುದನ್ನು ಸತ್ಯಕಿ ಸಾವರ್ಕರ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ. ಈ ಪುಸ್ತಕದಲ್ಲಿ ಧಾರ್ಮಿಕ ನಂಬಿಕೆಗಳು, ದೇವರ ಅಸ್ತಿತ್ವದ ಕುರಿತು ವಿಮರ್ಶಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿದ್ದು, ಸನಾತನ ಧರ್ಮವನ್ನು ʼನಿಸರ್ಗದ ನಿಯಮಗಳʼ ಆಧಾರದಲ್ಲಿ 'ಶಾಶ್ವತ ಸತ್ಯ' ಎಂದು ಮರು ವ್ಯಾಖ್ಯಾನಿಸಲಾಗಿದೆ.
ಲಂಡನ್‌ನಲ್ಲಿ ನಡೆದ ಭಾಷಣದಲ್ಲಿ ಸಾವರ್ಕರ್ ಅವರನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸತ್ಯಕಿ ಸಾವರ್ಕರ್ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣ ಪುಣೆಯ ವಿಶೇಷ ನ್ಯಾಯಾಧೀಶ ಅಮೋಲ್ ಶಿಂಧೆ ಅವರ ಪೀಠದ ಮುಂದೆ ವಿಚಾರಣೆ ನಡೆಯುತ್ತಿದೆ. ವಕೀಲ ಮಿಲಿಂದ್ ಪವಾರ್ ಅವರು ರಾಹುಲ್ ಗಾಂಧಿ ಅವರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಗುರುವಾರ ವಿಚಾರಣೆ ವೇಳೆ ಮಿಲಿಂದ್ ಪವಾರ್ ಅವರು ʼಸಾವರ್ಕರಾಂಚೆ ವಿಶ್ವಜ್ಞಾನ ವಿನಬಂಧʼ ಪುಸ್ತಕದ ಪ್ರತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು ಮತ್ತು ಸಾವರ್ಕರ್ ಸ್ವತಃ ಬರೆದ ಈ ಪುಸ್ತಕದ ಬಗ್ಗೆ ಸತ್ಯಕಿಗೆ ತಿಳಿದಿದೆಯೇ ಎಂದು ಪ್ರಶ್ನಿಸಿದರು. ನಂತರ ಅವರು ಪುಸ್ತಕದ ಕೆಲವು ಭಾಗಗಳನ್ನು ಓದಿದರು, ಅದು ಮೂಲತಃ ದೇವರ ಅಸ್ತಿತ್ವವನ್ನು ಪ್ರಶ್ನಿಸಿತ್ತು.
ಮುಂದುವರಿದ ವಿಚಾರಣೆಯಲ್ಲಿ, ವಕೀಲ ಮಿಲಿಂದ್ ಪವಾರ್ ಅವರು ಸಾವರ್ಕರ್ ಅವರ ಪುಸ್ತಕದಲ್ಲಿನ ಒಂದು ಭಾಗವನ್ನು ಉಲ್ಲೇಖಿಸಿದರು. ಅದರಲ್ಲಿ ಅಲಾವುದ್ದೀನ್ ಖಿಲ್ಜಿ ಸೇರಿದಂತೆ ಕೆಲವು ಚಕ್ರವರ್ತಿಗಳು ಮಹಾರಾಷ್ಟ್ರ ಹಾಗೂ ದೇಶದ ಇತರ ಭಾಗಗಳಲ್ಲಿ ಹಿಂದೂ ರಾಜರನ್ನು ಸೋಲಿಸಿ ಹಿಂದೂ ದೇವಾಲಯಗಳನ್ನು ಕೆಡವುವ ಹಂತಕ್ಕೆ ಹೋದಾಗ ಹಿಂದೂ ದೇವರುಗಳ ಅಸ್ತಿತ್ವದ ಬಗ್ಗೆಯೇ ಪ್ರಶ್ನಿಸಲಾಗಿತ್ತು ಎಂದು ಪವಾರ್ ಗಮನ ಸೆಳೆದರು.
ಸಾವರ್ಕರ್ ಅವರ ಪುಸ್ತಕದಲ್ಲಿನ ಕೆಲವು ಭಾಗಗಳಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಧಾರ್ಮಿಕ ಆಚರಣೆಗಳ ಕುರಿತು ಸಾವರ್ಕರ್ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಅವುಗಳನ್ನು ಟೀಕಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಈ ವೇಳೆ ಕುತೂಹಲಕಾರಿಯಾಗಿ ಪುಸ್ತಕವನ್ನು ಸಾವರ್ಕರ್ ಅವರೇ ಬರೆದಿದ್ದಾರೆ ಎಂದು ಸತ್ಯಕಿ ಸಾವರ್ಕರ್ ಒಪ್ಪಿಕೊಂಡಿದ್ದಾರೆ. ಆದರೆ, ಈ ಪುಸ್ತಕವನ್ನು ರಾಹುಲ್ ಗಾಂಧಿ ಪರ ವಕೀಲರು ಉಲ್ಲೇಖಿಸಿರುವುದಕ್ಕೆ ಸತ್ಯಕಿ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

