ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಬಿ.ನಾಗೇಂದ್ರ ಶುಕ್ರವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಮಂತ್ರಿ ಮಂಡಲದ ಮೊದಲ ಸಚಿವರ ತಲೆದಂಡವಾದಂತಾಗಿದೆ.
ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿ.ನಾಗೇಂದ್ರ, 'ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣದಲ್ಲಿ ನನ್ನ ಯಾವುದೆ ಪಾತ್ರವಿಲ್ಲ. ಶೇ.100ರಷ್ಟು ಹಣವನ್ನು ವಾಪಸ್ ಪಡೆಯಲಾಗಿದೆ. ಬ್ಯಾಂಕಿನಲ್ಲಿ ಈ ಅಕ್ರಮ ನಡೆದಿರುವುದರಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡುವರೆ?' ಎಂದು ಪ್ರಶ್ನಿಸಿದರು.
'ಕಾಂಗ್ರೆಸ್ ಪಕ್ಷ ಹಾಗೂ ವರಿಷ್ಠರಿಗೆ, ಮುಖ್ಯಮಂತ್ರಿಗೆ ಮುಜುಗರ ಆಗಬಾರದು ಎಂಬ ಕಾರಣದಿಂದ ಸ್ವ ಇಚ್ಚೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಹೇಳುವಾಗ ಗದ್ಗದಿತರಾದ ನಾಗೇಂದ್ರ, ಕಣ್ಣೀರು ಹಾಕಿದರು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಹಾಗೂ ಸಚಿವ ರಿಝ್ವಾನ್ ಅರ್ಶದ್ ಸಮಾಧಾನಪಡಿಸಿದರು.
'ಮುಂಗಾರು ಅಧಿವೇಶನದಲ್ಲಿ ನಮ್ಮ ಸರಕಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ನೋಟಿಸ್ ನೀಡಿದ್ದರೆ ಚರ್ಚೆಗೆ ಸಿದ್ಧವಾಗಿತ್ತು. ಬರಗಾಲ, ಕೆಪಿಎಸ್‍ಸಿ ನೇಮಕಾತಿ ಹಗರಣ, ಕಾವೇರಿ ನೀರಿನ ಸಮಸ್ಯೆ, ಕಸ್ತೂರಿ ರಂಗನ್ ವರದಿ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಅವಕಾಶವಿತ್ತು. ಆದರೆ, ಇಲ್ಲದ ವಿಷಯವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸದನದ ಸಮಯವನ್ನು ಹಾಳು ಮಾಡಿದರು' ಎಂದು ನಾಗೇಂದ್ರ ಕಿಡಿಗಾರಿದರು.
'ಶೂದ್ರರು, ದಲಿತರು, ಮಹಿಳೆಯರು, ಆದಿವಾಸಿಗಳು, ಅಲ್ಪಸಂಖ್ಯಾತರು ಬೆಳೆಯುವುದು ಈ ಮನುವಾದಿಗಳಿಗೆ ಇಷ್ಟವಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನನ್ನ ಪಾತ್ರವಿದೆ ಎಂದು ಸುಳ್ಳು ಹೇಳಿಕೊಂಡು, ನಮ್ಮ ಸಮುದಾಯದ ಮುಗ್ಧ ಜನರನ್ನು ನಂಬಿಸಲು ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಅವರಿಗೆ ಒಳ್ಳೆಯದಾಗುವುದಿಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
'2024ರಲ್ಲಿಯೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾನು ರಾಜೀನಾಮೆ ನೀಡಿದೆ. ಎಸ್‍ಐಟಿ ಮೂಲಕ ತನಿಖೆ ನಡೆಯಿತು. ವಿನಾಕಾರಣ ಈ.ಡಿ ಮಧ್ಯಪ್ರವೇಶ ಮಾಡಿ, ಕುತಂತ್ರ ನಡೆಸಿ ನನ್ನನ್ನು ಜೈಲಿಗೆ ಕಳುಹಿಸಿದರು. ಜಾಮೀನು ಪಡೆದು ಹೊರಗೆ ಬಂದೆ, ಈ.ಡಿ ದಾಖಲಿಸಿದ ಮೊದಲ ಆರೋಪ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ಎರಡನೆ ಆರೋಪ ಪಟ್ಟಿಯಲ್ಲಿ ತರಾತುರಿಯಾಗಿ ನನ್ನ ಹೆಸರು ಸೇರಿಸಲಾಯಿತು' ಎಂದು ನಾಗೇಂದ್ರ ಆರೋಪಿಸಿದರು.
'ನನಗೆ ನ್ಯಾಯಾಂಗ, ಸಂವಿಧಾನದ ಮೇಲೆ ಗೌರವವಿದೆ. ರಾಜ್ಯಪಾಲರೆ ನನಗೆ ಸಚಿವ ಸ್ಥಾನದ ಪ್ರಮಾಣ ವಚನ ಬೋಧಿಸಿದರು. ಈಗ ಅವರ ಮೂಲಕವೆ ವಿಪಕ್ಷಗಳು ನನ್ನ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ಕೊಡಿಸಿದ್ದಾರೆ. ಬಿಜೆಪಿಯಲ್ಲಿರುವ ಎಷ್ಟು ಮಂದಿ ವಿರುದ್ಧ ಪ್ರಕರಣಗಳು ದಾಖಲಾಗಿವೆ, ತಂದೆಯ ಸಹಿಯನ್ನೆ ನಕಲು ಮಾಡಿದವರು, ಶೇ.40ರಷ್ಟು ಲೂಟಿ ಮಾಡಿದವರು ನಿಮ್ಮ ಪಕ್ಷದಲ್ಲಿ ಇಲ್ಲವೇ?' ಎಂದು ನಾಗೇಂದ್ರ ಪ್ರಶ್ನಿಸಿದರು.
'ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮೂರು ವರ್ಷಗಳಾದರೂ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ. ಈಗ ಅವರು ನಿಮ್ಮ ಜೊತೆ ಮೈತ್ರಿಯಲ್ಲಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ವಿನಾಯಿತಿಯೆ? ಅವರಿಗೆ ಒಂದು ನ್ಯಾಯ, ನಮಗೆ ಒಂದು ನ್ಯಾಯವೇ?' ಎಂದು ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
'ಮುಂದಿನ ಚುನಾವಣೆಯಲ್ಲಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಹೋಗುತ್ತೇನೆ. ಒಬ್ಬ ನಿರಪರಾಧಿಯನ್ನು ಅಪರಾಧಿ ಮಾಡಲು ಹೊರಟಿದ್ದೀರಾ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಂತಹ ದೇಶದ ಹಿರಿಯ ನಾಯಕರನ್ನೆ ಅವಮಾನಿಸಿದ ನೀವು, ಇನ್ನೂ ನಮ್ಮನ್ನು ಬಿಡುತ್ತೀರಾ?' ಎಂದು ನಾಗೇಂದ್ರ ಹೇಳಿದರು.
ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ: 'ಪಕ್ಷದ ವರಿಷ್ಠರು ಅವಕಾಶ ನೀಡಿದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ. ಬಳ್ಳಾರಿಯ ಸ್ವ ಘೋಷಿತ ನಾಯಕರಾದ ಶ್ರೀರಾಮುಲು, ಜನಾರ್ದನ ರೆಡ್ಡಿ ಅವರೇ ಬನ್ನಿ ಜನತಾ ನ್ಯಾಯಾಲಯಕ್ಕೆ ಹೋಗೋಣ. ನಾನು ತಪ್ಪು ಮಾಡಿದ್ದರೆ ನನ್ನ ಜನ ನನ್ನನ್ನು ಸೋಲಿಸುತ್ತಾರೆ. ಶ್ರೀರಾಮುಲು ಅಣ್ಣ ನಿಮಗೆ ತಾಕತ್ತಿದ್ದರೆ ನನ್ನ ಸವಾಲು ಸ್ವೀಕರಿಸಿ ಅಖಾಡಕ್ಕೆ ಬನ್ನಿ' ಎಂದು ನಾಗೇಂದ್ರ ಸವಾಲು ಹಾಕಿದರು.
'ಈ.ಡಿ, ಸಿಬಿಐ ಇವುಗಳಿಗೆಲ್ಲ ನಾನು ಹೆದರುವುದಿಲ್ಲ. ಜನಾರ್ದನ ರೆಡ್ಡಿ, ಶ್ರೀರಾಮುಲು ನನ್ನ ವಿರುದ್ಧ ಮಾಡುತ್ತಿರುವ ಕುತಂತ್ರಗಳೆಲ್ಲ ಗೊತ್ತಿದೆ. ಬಳ್ಳಾರಿಯಲ್ಲಿ ಚಲಾವಣೆಯಲ್ಲಿ ಇಲ್ಲದ ನಾಣ್ಯಗಳಾಗಿರುವ ನಿಮಗೆ ಒಂದಲ್ಲ, ಎರಡೆರಡು ಬಾರಿ ಜನ ಛೀಮಾರಿ ಹಾಕಿದ್ದಾರೆ. ಅಖಾಡಕ್ಕೆ ಇಳಿಯಲು ನಾನು ಸಿದ್ಧ. ಕಾನೂನು ಹೋರಾಟದಲ್ಲಿ ನಾನು ಆರೋಪ ಮುಕ್ತನಾಗಿ ಹೊರಬರುತ್ತೇನೆ ಎಂಬ ಸಂಪೂರ್ಣ ವಿಶ್ವಾಸವಿದೆ' ಎಂದು ಅವರು ಹೇಳಿದರು.
ವಾಲ್ಮೀಕಿ ಜನಾಂಗದ ದೃಷ್ಟಿಯಲ್ಲಿ ನನ್ನನ್ನು ಖಳನಾಯಕನನ್ನಾಗಿ ಮಾಡಲು ಹೊರಟಿದ್ದಾರೆ. ನನ್ನ ಸಮಾಜಕ್ಕೆ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬುದು ಗೊತ್ತಿದೆ. ನಿಮ್ಮ ಕುತಂತ್ರಗಳಿಗೆಲ್ಲ ಉತ್ತರ ಕೊಡುವ ಕಾಲ ಬಹಳ ಬೇಗ ಬರಲಿದೆ ಎಂದು ನಾಗೇಂದ್ರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ರಿಝ್ವಾನ್ ಅರ್ಶದ್, ಡಾ.ಅಜಯ್ ಸಿಂಗ್, ರಾಜ್ಯಸಭಾ ಸದಸ್ಯರಾದ ಡಾ.ಸೈಯದ್ ನಾಸಿರ್ ಹುಸೇನ್, ಜಿ.ಸಿ.ಚಂದ್ರಶೇಖರ್, ಶಾಸಕ ನಾ.ರಾ.ಭರತ್ ರೆಡ್ಡಿ ಉಪಸ್ಥಿತರಿದ್ದರು.

