Dailyhunt Logo
  • Light mode
    Follow system
    Dark mode
    • Play Story
    • App Story
ಸದ್ಯಕ್ಕೆ ರಾಜಕೀಯ ಪಕ್ಷವಲ್ಲ; ಜನಪರ ಹೋರಾಟದ ಸಂಘಟನೆಯಾಗಿ ಕಾರ್ಯನಿರ್ವಹಣೆ: CJP

ಸದ್ಯಕ್ಕೆ ರಾಜಕೀಯ ಪಕ್ಷವಲ್ಲ; ಜನಪರ ಹೋರಾಟದ ಸಂಘಟನೆಯಾಗಿ ಕಾರ್ಯನಿರ್ವಹಣೆ: CJP

ತ್ರಪತಿ ಸಂಭಾಜಿನಗರ: ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುವುದಿಲ್ಲ. ಸಾರ್ವಜನಿಕ ಸಮಸ್ಯೆಗಳ ಕುರಿತು ಜನರ ಪರವಾಗಿ ಹೋರಾಟ ನಡೆಸುವ ಸಂಘಟನೆಯಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದೆ ಎಂದು ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಹೇಳಿದರು.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಬುಧವಾರ ನಡೆದ CJPಯ ಕೋರ್ ತಂಡದ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಕ್ಕೆ ಈಗ ಮತ್ತೊಂದು ರಾಜಕೀಯ ಪಕ್ಷಕ್ಕಿಂತ ಸಾರ್ವಜನಿಕ ಸಮಸ್ಯೆಗಳ ಕುರಿತು ಜನರ ಪರವಾಗಿ ಧ್ವನಿ ಎತ್ತುವ ಸಂಘಟನೆಯ ಅಗತ್ಯವಿದೆ ಎಂದು ಹೇಳಿದರು.

"ಸದ್ಯಕ್ಕೆ ನಾವು ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುವುದಿಲ್ಲ. ಸಾರ್ವಜನಿಕ ಸಮಸ್ಯೆಗಳ ಕುರಿತು ಜನರ ಪರವಾಗಿ ಹೋರಾಟ ನಡೆಸುವ ಸಂಘಟನೆಯಾಗಿ ಕೆಲಸ ಮಾಡಲಿದ್ದೇವೆ. ಈಗ ದೇಶಕ್ಕೆ ಅಗತ್ಯವಿರುವುದು ಅಂಥ ಸಂಘಟನೆಯೇ," ಎಂದು ದೀಪ್ಕೆ ಹೇಳಿದರು.

ಸಭೆಯಲ್ಲಿ ಮಾಧ್ಯಮ ಮತ್ತು ನ್ಯಾಯಾಂಗ ಸೇರಿದಂತೆ ವಿವಿಧ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆ ಕುಸಿಯುತ್ತಿರುವುದು, ಎಥೆನಾಲ್ ಮಿಶ್ರಿತ ಇಂಧನ ಬಳಕೆ ಹಾಗೂ ಹೆಚ್ಚುತ್ತಿರುವ ನಿರುದ್ಯೋಗ ಸೇರಿದಂತೆ ಹಲವು ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಕುರಿತು ಚರ್ಚೆ ನಡೆಯಿತು.

CJPಯ ಮುಖ್ಯ ವಕ್ತಾರ ಸೌರವ್ ದಾಸ್ ಮಾತನಾಡಿ, ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಚಳವಳಿಯ ಮಾರ್ಗದರ್ಶಕರಾಗಿ ಮುಂದುವರಿಯಲಿದ್ದು, ಪ್ರಮುಖ ವಿಷಯಗಳಲ್ಲಿ ಸಂಘಟನೆ ಅವರ ಸಲಹೆ ಪಡೆಯಲಿದೆ ಎಂದು ಹೇಳಿದರು.

NEET UG ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ಇತ್ತೀಚೆಗೆ CJP ನಡೆಸಿದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ FIR ಗಳನ್ನು ಹಿಂಪಡೆಯುವಂತೆ ಸಂಘಟನೆ ಒತ್ತಾಯಿಸಲಿದೆ ಎಂದು ದಾಸ್ ತಿಳಿಸಿದರು. ಈ ಕುರಿತು ಸರಕಾರದ ಪ್ರತಿನಿಧಿಗಳೊಂದಿಗೆ ಮಾತುಕತೆಗಳು ನಡೆಯುತ್ತಿವೆ ಎಂದರು.

ದೇಶದ ವಿವಿಧ ಭಾಗಗಳಲ್ಲಿ ನಡೆದ ವಿದ್ಯಾರ್ಥಿ ಚಳವಳಿಗಳಲ್ಲಿ ಗಾಯಗೊಂಡ ಪ್ರತಿಭಟನಾಕಾರರಿಗೆ ಕಾನೂನು ಹಾಗೂ ವೈದ್ಯಕೀಯ ನೆರವು ಒದಗಿಸುವ ಕೆಲಸವನ್ನೂ ಸಂಘಟನೆ ಕೈಗೊಂಡಿದೆ ಎಂದು ಅವರು ಹೇಳಿದರು.

NEET UG ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಅಭಿಯಾನವನ್ನು ಮುನ್ನಡೆಸಲು ಅಭಿಜೀತ್ ದೀಪ್ಕೆ ಜೂನ್‌ ನಲ್ಲಿ ಅಮೆರಿಕದಿಂದ ಭಾರತಕ್ಕೆ ಮರಳಿದ್ದರು. ಅವರ ನೇತೃತ್ವದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ಯುವ ಪ್ರತಿಭಟನಾಕಾರರು ದಿಲ್ಲಿಯಲ್ಲಿ ಒಗ್ಗೂಡಿ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು.

ಈ ಚಳವಳಿಗೆ ದೇಶದಾದ್ಯಂತ Gen Z ಯುವ ಸಮೂಹದಿಂದ ವ್ಯಾಪಕ ಬೆಂಬಲ ದೊರೆತು, ಬಳಿಕ ಹಲವಾರು ನಗರಗಳಿಗೆ ವಿಸ್ತರಿಸಿತು. ಆದರೆ ಕೆಲವು ಕಡೆ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದು, ದಿಲ್ಲಿ, ಮುಂಬೈ, ಕೋಲ್ಕತ್ತಾ ಹಾಗೂ ಬಿಹಾರದಲ್ಲಿ ಪೊಲೀಸ್ ಕ್ರಮ ಜರುಗಿದೆ. ಹಲವಾರು ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣಗಳೂ ದಾಖಲಾಗಿವೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi