Dailyhunt
Sagara | ಕೆಫೆ ಮಾಲೀಕನಿಂದಲೇ ಕಾರ್ಮಿಕನ ಹತ್ಯೆ; ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

Sagara | ಕೆಫೆ ಮಾಲೀಕನಿಂದಲೇ ಕಾರ್ಮಿಕನ ಹತ್ಯೆ; ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಸಾಗರ : ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಟಿಂಕೂ ಶರ್ಮಾ ಎಂಬಾತನ ಕೊಲೆಗೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ನಗರ ಠಾಣೆ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ರಸ್ತೆಯ ರೂಫ್ ಟಾಪ್‌ ಕೆಫೆ ಮತ್ತು ಗೇಮ್ ಜೋನ್‍ನಲ್ಲಿ ಬಿಹಾರ ಮೂಲದ ಟಿಂಕೂ ಶರ್ಮಾ ಎಂಬಾತ ಅಡುಗೆ ಕೆಲಸಕ್ಕೆ ಆರು ತಿಂಗಳ ಹಿಂದೆ ಸೇರಿ ಕೊಂಡಿದ್ದನು.

ಬುಧವಾರ ತಡರಾತ್ರಿ ಕೆಫೆ ಮಾಲೀಕ ಇಮ್ರಾನ್ ಎಂಬಾತನು ತನ್ನ ಕೆಫೆಯಲ್ಲಿ ಟಿಂಕೂ ಶರ್ಮ ಹಣ ಕಳ್ಳತನ ಮಾಡುತ್ತಿದ್ದಾನೆ ಎಂದು ಆರೋಪಿಸಿ ಕೋಲಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಟಿಂಕೂ ಶರ್ಮಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಾಬರಿಗೊಂಡ ಮಾಲೀಕ ಇಮ್ರಾನ್ ತನ್ನ ಕಾರಿನಲ್ಲಿ ಮೃತದೇಹವನ್ನು ಹಾಕಿಕೊಂಡು ನಗರದ ಕೆಲವು ಭಾಗಗಳಲ್ಲಿ ಸುತ್ತಾಡಿದ್ದಾನೆ. ಕೊನೆಗೆ ನೆಹರೂ ನಗರದಲ್ಲಿರುವ ತನ್ನ ಮನೆ ಹತ್ತಿರ ಬಂದಿದ್ದಾನೆ.

ನೆಹರೂ ನಗರದಲ್ಲಿರುವ ಇಮ್ರಾನ್ ಮನೆ ಎದುರು ಕಾರಿನಲ್ಲಿ ಮೃತದೇಹ ಇರುವುದನ್ನು ಪತ್ತೆಹಚ್ಚಿದ ಪೊಲೀಸರು ಸ್ಥಳಕ್ಕೆ ಬಂದು ಕಾರುಸಹಿತ ಆರೋಪಿ ಇಮ್ರಾನ್‍ನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ನಿಖಿಲ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಮಾಲೀಕ ಮತ್ತು ಕಾರ್ಮಿಕನ ನಡುವೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದು ಕೊಲೆಯಲ್ಲಿ ಅಂತ್ಯಗೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕೊಲೆಯಾಗಿರುವ ಟಿಂಕೂ ಶರ್ಮಾ ಬಿಹಾರದ ಪಾಟ್ನಾ ಸಮೀಪದ ಬಲ್ಪಾಪುರದ ವಾಸಿಯಾಗಿದ್ದು, ಆರು ತಿಂಗಳ ಹಿಂದೆ ಇಲ್ಲಿಗೆ ಬಂದು ಕೆಲಸಕ್ಕೆ ಸೇರಿಕೊಂಡಿದ್ದಾನೆ ಎನ್ನಲಾಗಿದೆ. ಮೃತದೇಹದ ಮೇಲೆ ಕೆಲವು ಗುರುತುಗಳು ಕಂಡು ಬಂದಿದ್ದು ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಹರಿತವಾದ ಆಯುಧ ಬಳಸಿದಂತೆ ಕಂಡು ಬರುತ್ತಿಲ್ಲ. ವಿಚಾರಣೆ ನಂತರ ಇನ್ನಷ್ಟು ಮಾಹಿತಿ ತಿಳಿದು ಬರುತ್ತದೆ ಎಂದು ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi