Dailyhunt Logo
  • Light mode
    Follow system
    Dark mode
    • Play Story
    • App Story
ಸೈಫ್ ಅಲಿ ಖಾನ್ ಇರಿತ ಪ್ರಕರಣ | ತಪ್ಪೊಪ್ಪಿಕೊಳ್ಳಲು ಆರೋಪಿ ಸಿದ್ಧ; ಕ್ಷಮೆಗಾಗಿ ಮನವಿ

ಸೈಫ್ ಅಲಿ ಖಾನ್ ಇರಿತ ಪ್ರಕರಣ | ತಪ್ಪೊಪ್ಪಿಕೊಳ್ಳಲು ಆರೋಪಿ ಸಿದ್ಧ; ಕ್ಷಮೆಗಾಗಿ ಮನವಿ

ಮುಂಬೈ, ಆ.28: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರನ್ನು 2025ರ ಜನವರಿಯಲ್ಲಿ ಬಾಂದ್ರಾದಲ್ಲಿನ ಅವರ ನಿವಾಸದಲ್ಲಿ ಇರಿದ ಪ್ರಕರಣದ ಆರೋಪಿ ಮುಹಮ್ಮದ್ ಶರೀಫುಲ್ ಇಸ್ಲಾಂ, ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಳ್ಳಲು ಮುಂದಾಗಿದ್ದು, ಕ್ಷಮೆ ನೀಡುವಂತೆ ಮನವಿ ಮಾಡಿದ್ದಾನೆ.

ಈ ಸಂಬಂಧ ಶರೀಫುಲ್ ಇಸ್ಲಾಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರಕರಣದಲ್ಲಿ ತಪ್ಪೊಪ್ಪಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ. ಅಲ್ಲದೆ, ಕ್ಷಮೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ ಎಂದು ಆತನ ವಕೀಲ ವಿಪುಲ್ ದುಶಿಂಗ್ ತಿಳಿಸಿದ್ದಾರೆ.

ಘಟನೆ ನಡೆದ ಎರಡು ದಿನಗಳ ಬಳಿಕ ಬಂಧಿಸಲ್ಪಟ್ಟಿದ್ದ ಶರೀಫುಲ್ ಇಸ್ಲಾಂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆರೋಪಿಯ ಅರ್ಜಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ನ ಪ್ರತಿಕ್ರಿಯೆ ಕೇಳಿರುವ ನ್ಯಾಯಾಲಯ, ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ, ಈ ತಿಂಗಳ ಆರಂಭದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಿ.ಪಿ. ದೇಶಮುಖ್ ಅವರು ಶರೀಫುಲ್ ಇಸ್ಲಾಂ ವಿರುದ್ಧದ ದೋಷಾರೋಪಗಳನ್ನು ನಿಗದಿಪಡಿಸಿದ್ದರು. ಇದರೊಂದಿಗೆ ಪ್ರಕರಣದ ವಿಚಾರಣೆ ಆರಂಭಗೊಂಡಿತ್ತು. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶರೀಫುಲ್ ಇಸ್ಲಾಂ ವಿರುದ್ಧ ದೋಷಾರೋಪಗಳನ್ನು ದಾಖಲಿಸಲಾಗಿದೆ.

2025ರ ಜನವರಿ 16ರಂದು ಬಾಂದ್ರಾದ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಲ್ಲಿ ವಾಸಿಸುತ್ತಿದ್ದ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ಶರೀಫುಲ್ ಇಸ್ಲಾಂ ನುಸುಳಿದ್ದ. ಬಳಿಕ ಹರಿತವಾದ ಚಾಕುವಿನಿಂದ ನಟನಿಗೆ ಹಲವು ಬಾರಿ ಇರಿದಿದ್ದ.

ಘಟನೆಯಲ್ಲಿ 54 ವರ್ಷದ ಸೈಫ್ ಅಲಿ ಖಾನ್ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದರು. ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಘಟನೆಯ ಐದು ದಿನಗಳ ಬಳಿಕ ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi