Dailyhunt
ಸನ್ನಡತೆ ಆಧಾರದ ಮೇಲೆ 125 ಖೈದಿಗಳ ಬಿಡುಗಡೆಗೆ ರಾಜ್ಯ ಸರಕಾರ ಆದೇಶ

ಸನ್ನಡತೆ ಆಧಾರದ ಮೇಲೆ 125 ಖೈದಿಗಳ ಬಿಡುಗಡೆಗೆ ರಾಜ್ಯ ಸರಕಾರ ಆದೇಶ

ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 27: ಗಂಭೀರ ಅಪರಾಧ ಪ್ರಕರಣ ಸಂಬಂಧ ಜೀವಾವಧಿ ಶಿಕ್ಷಾ ಬಂಧಿಗಳಾಗಿದ್ದ 125 ಖೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ರಾಜ್ಯ ಸರಕಾರದ ಆದೇಶದಂತೆ ಬುಧವಾರವೇ ಹಲವು ಕಾರಾಗೃಹಗಳಿಂದ ಗುರುತಿಸಿದ ಖೈದಿಗಳನ್ನು ಬಿಡುಗಡೆಗೊಳಿಸಿದ್ದು, ಅಗತ್ಯ ಸಾರಿಗೆ ವ್ಯವಸ್ಥೆಯೂ ಕಲ್ಪಿಸಲಾಗಿದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ತಿಳಿಸಿದ್ದಾರೆ.

ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಸ್ಥಾಯಿ ಸಲಹಾ ಮಂಡಳಿಗಳು ಒಟ್ಟು 211 ಜೀವಾವಧಿ ಶಿಕ್ಷಾ ಬಂದಿಗಳ ಪ್ರಕರಣಗಳನ್ನು ಪರಿಶೀಲಿಸಿದರು. ಈ ಪೈಕಿ 50 ಜೀವಾವಧಿ ಶಿಕ್ಷಾ ಬಂದಿಗಳ ಪ್ರಕರಣಗಳನ್ನು ವಿವಿಧ ಕಾರಣಗಳ ಮೇರೆಗೆ ಮುಂದೂಡಿ, ಉಳಿದ 161 ಖೈದಿಗಳ ಪ್ರಕರಣಗಳನ್ನು ಅವಧಿಪೂರ್ವ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಆನಂತರ ಒಳಾಡಳಿತ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ನಡೆದ ಎಲ್‍ಸಿಆರ್ ಸಭೆಯಲ್ಲಿ 161 ಖೈದಿಗಳ ಬಿಡುಗಡೆಗೆ ಪ್ರಸ್ತಾವನೆ ಪರಿಶೀಲಿಸಿ, 139 ಖೈದಿಗಳನ್ನು ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿತ್ತು. ಬಳಿಕ ಎ.26ರಂದು ನಡೆದ ಸಚಿವ ಸಂಪುಟದಲ್ಲಿಯೂ 139 ಖೈದಿಗಳನ್ನು ಬಿಡುಗಡೆಗೆ ಅನುಮೋದನೆ ನೀಡಲಾಯಿತು.

ಆದರೆ, ರಾಜ್ಯಪಾಲರು 12 ಖೈದಿಗಳ ಪ್ರಕರಣ ತಿರಸ್ಕರಿಸಿ, ಇನ್ನೆರಡು ಖೈದಿಗಳ ಪ್ರಕರಣಗಳಿಗೆ ಕೇಂದ್ರ ಗೃಹ ಇಲಾಖೆಯ ಅನುಮೋದನೆ ಪಡೆದು, ಅಂಗೀಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿ, ಉಳಿದ 125 ಜೀವಾವಧಿ ಖೈದಿಗಳ ಪ್ರಕರಣಗಳಿಗೆ ಮಾಫಿ ನೀಡಿ, ಅವಧಿ ಪೂರ್ವ ಬಿಡುಗಡೆಗೆ ಹಸಿರು ನಿಶಾನೆ ತೋರಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಬೆಂಗಳೂರು-35 ಖೈದಿಗಳು, ಬೆಳಗಾವಿ ಕೇಂದ್ರ ಕಾರಾಗೃಹ-16, ಮೈಸೂರು ಕೇಂದ್ರ ಕಾರಾಗೃಹ-19 ಸೇರಿದಂತೆ ಒಟ್ಟು 125 ಖೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi