Dailyhunt Logo
  • Light mode
    Follow system
    Dark mode
    • Play Story
    • App Story
ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಹಿಂದೂ ಪ್ರಾರ್ಥನೆ ಪಠಿಸುವಂತೆ ಒತ್ತಾಯಿಸುವಂತಿಲ್ಲ: ಛತ್ತೀಸ್‌ಗಢ ಹೈಕೋರ್ಟ್

ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಹಿಂದೂ ಪ್ರಾರ್ಥನೆ ಪಠಿಸುವಂತೆ ಒತ್ತಾಯಿಸುವಂತಿಲ್ಲ: ಛತ್ತೀಸ್‌ಗಢ ಹೈಕೋರ್ಟ್

ರಾಯ್ಪುರ, ಜು. 4: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಸರಸ್ವತಿ ವಂದನೆ ಸೇರಿದಂತೆ ಹಿಂದೂ ಧಾರ್ಮಿಕ ಪ್ರಾರ್ಥನೆಗಳು ಮತ್ತು ಸ್ತುತಿಗೀತೆಗಳನ್ನು ಪಠಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸರಸ್ವತಿ ವಂದನೆಯಂತಹ ಸ್ತುತಿಗೀತೆಗಳನ್ನು ಪಠಿಸುವುದನ್ನು ಕಡ್ಡಾಯಗೊಳಿಸುವ ರಾಜ್ಯದ ಬಿಜೆಪಿ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಜೂನ್ ತಿಂಗಳಲ್ಲಿ ಈ ಕುರಿತು ಸುತ್ತೋಲೆ ಹೊರಡಿಸಲಾಗಿದ್ದರೂ, ಅದನ್ನು ಇನ್ನೂ ಜಾರಿಗೆ ತಂದಿಲ್ಲ ಎಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ. ಈ ವಾದವನ್ನು ದಾಖಲಿಸಿಕೊಂಡ ನ್ಯಾಯಪೀಠವು, ಯಾವುದೇ ಮಗುವನ್ನು ಪ್ರಾರ್ಥನೆಗಳನ್ನು ಪಠಿಸುವಂತೆ ಒತ್ತಾಯಿಸಿದರೆ ಅರ್ಜಿದಾರರು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಲು ಸ್ವಾತಂತ್ರ್ಯ ಹೊಂದಿರುತ್ತಾರೆ ಎಂದು ಹೇಳಿದೆ.

ಅಂತಹ ಯಾವುದೇ ಪ್ರಕರಣ ನ್ಯಾಯಾಲಯದ ಗಮನಕ್ಕೆ ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೀಠವು ತಿಳಿಸಿದ್ದು, ಅರ್ಜಿಯನ್ನು ವಿಲೇವಾರಿ ಮಾಡಿದೆ.

ಜೂನ್ 12ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ, ಛತ್ತೀಸ್‌ಗಢದ ಸರ್ಕಾರಿ ಶಾಲೆಗಳು "ಬೌದ್ಧಿಕ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಜಾಗೃತಿ"ಗೆ ಒತ್ತು ನೀಡುವ ರಚನಾತ್ಮಕ ದೈನಂದಿನ ಚಟುವಟಿಕೆಗಳನ್ನು ಅನುಸರಿಸಬೇಕು ಎಂದು ನಿರ್ದೇಶಿಸಲಾಗಿದೆ ಎಂದು The New Indian Express ವರದಿ ಮಾಡಿದೆ.

ಸುತ್ತೋಲೆಯ ಅನ್ವಯ, ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ರಾಷ್ಟ್ರಗೀತೆ, ದೀಪ ಮಂತ್ರ, ಸರಸ್ವತಿ ವಂದನೆ ಮತ್ತು ಗುರು ಮಂತ್ರವನ್ನು ಕಡ್ಡಾಯವಾಗಿ ಪಠಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಮಧ್ಯಾಹ್ನದ ಊಟಕ್ಕೂ ಮುನ್ನ ಭೋಜನ ಮಂತ್ರವನ್ನು ಹಾಗೂ ವಿದ್ಯಾರ್ಥಿಗಳು ಶಾಲೆಯಿಂದ ನಿರ್ಗಮಿಸುವ ಮೊದಲು ಗಾಯತ್ರಿ ಮಂತ್ರ ಮತ್ತು ಶಾಂತಿ ಮಂತ್ರವನ್ನು ಪಠಿಸಬೇಕು ಎಂದು ಆದೇಶಿಸಲಾಗಿದೆ.

ಛತ್ತೀಸ್‌ಗಢ ವಕ್ಫ್ ಮಂಡಳಿಯ ಅಧ್ಯಕ್ಷ ಅಬ್ದುಲ್ ಸಲಾಂ ರಿಝ್ವಿ, ಅಲ್ಪಸಂಖ್ಯಾತ ಇಲಾಖೆಯ ಮಾಜಿ ಅಧ್ಯಕ್ಷ ಮಹೇಂದ್ರ ಛಬ್ಡಾ ಮತ್ತು ಬಿಲಾಸ್‌ಪುರ ಮೂಲದ ಸಾಮಾಜಿಕ ಕಾರ್ಯಕರ್ತ ಶಫೀಕ್ ಅಹ್ಮದ್ ಅವರು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಸುತ್ತೋಲೆಯು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತತೆಯ ತತ್ವ ಹಾಗೂ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ. ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಇಚ್ಛಿಸದ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಸರ್ಕಾರದ ಆದೇಶ ವಿಫಲವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ ಎಂದು barandbench ವರದಿ ಮಾಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi