Dailyhunt Logo
  • Light mode
    Follow system
    Dark mode
    • Play Story
    • App Story
'ಶಾಂತಿ ಬಾಂಡ್‌ಗೆ ಸಹಿ ಹಾಕುವುದಿಲ್ಲ': AISA ಅಧ್ಯಕ್ಷೆ ನೇಹಾ ಬೋರಾ ಪಟ್ಟು

'ಶಾಂತಿ ಬಾಂಡ್‌ಗೆ ಸಹಿ ಹಾಕುವುದಿಲ್ಲ': AISA ಅಧ್ಯಕ್ಷೆ ನೇಹಾ ಬೋರಾ ಪಟ್ಟು

ಹೊಸದಿಲ್ಲಿ: ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ನಿಯಂತ್ರಿಸಲು ಶಾಂತಿ ಬಾಂಡ್‌ಗಳನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿರುವ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (AISA) ಅಧ್ಯಕ್ಷೆ ನೇಹಾ ಬೋರಾ, ಪೊಲೀಸರ ಬಾಂಡ್‌ಗೆ ಸಹಿ ಹಾಕಲು ನಿರಾಕರಿಸಿದ್ದಾರೆ.

ಶಾಂತಿಯ ಹೆಸರಿನಲ್ಲಿ ಸಾಂವಿಧಾನಿಕ ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.

ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೇಹಾ, ಮತದಾರರ ಪಟ್ಟಿ ಪರಿಷ್ಕರಣೆ ವಿವಾದವನ್ನು ಪ್ರಸ್ತಾಪಿಸಿ, ದೇಶದಲ್ಲಿ ಸುಮಾರು 13 ಕೋಟಿ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಗಂಭೀರ ವಿಷಯವನ್ನು ಮುಂದಿಟ್ಟಿದ್ದಾರೆ. ಹಲವು ವರ್ಷಗಳಿಂದ ಮತದಾನ ಮಾಡುತ್ತಿದ್ದವರು ದಿಢೀರನೆ ತಮ್ಮ ಹಕ್ಕು ಕಳೆದುಕೊಂಡರೆ ಮೌನವಾಗಿ ಕುಳಿತುಕೊಳ್ಳಬೇಕೇ ಎಂದು ಪ್ರಶ್ನಿಸಿದ್ದಾರೆ.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರಿಂದ ಜನರ ಬದುಕು ಅತಂತ್ರವಾಗಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನಬದ್ಧವಾಗಿ ಶಾಂತಿಯುತ ಪ್ರತಿಭಟನೆ ನಡೆಸಿ ಧ್ವನಿ ಎತ್ತಿದರೆ ಅದನ್ನು ಶಾಂತಿಭಂಗ ಎಂದು ಕರೆಯುವುದು ಎಷ್ಟು ಸರಿ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

'ಶಾಂತಿ ಯಾರ ಅನುಕೂಲಕ್ಕಾಗಿ?'

ಸರ್ಕಾರಕ್ಕೆ ಮುಜುಗರವಾಗದಂತೆ ರಸ್ತೆಗಳು ಖಾಲಿಯಾಗಿರುವುದೇ ಶಾಂತಿಯೇ ಅಥವಾ ಜನರಿಗೆ ಅವರ ಮೂಲಭೂತ ಹಕ್ಕುಗಳು ದೊರೆಯುವುದೇ ನಿಜವಾದ ಶಾಂತಿಯೇ ಎಂಬ ಪ್ರಶ್ನೆಯನ್ನು ನೇಹಾ ಮುಂದಿಟ್ಟಿದ್ದಾರೆ.

ಸರ್ಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಮಾತ್ರ ಶಾಂತಿಯನ್ನು ವ್ಯಾಖ್ಯಾನಿಸಬಾರದು. ಜನರು ಪ್ರಶ್ನೆ ಕೇಳದಂತೆ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ನ್ಯಾಯಯುತವಾಗಿ ಪ್ರಶ್ನಿಸುವ ಪ್ರತಿಯೊಂದು ನಡೆಯನ್ನೂ ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಪ್ರಯತ್ನವೆಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಾಂಡ್‌ ಗೆ ಸಹಿ ಹಾಕಿದರೂ ತಪ್ಪದ ಬಂಧನ

ಶಾಂತಿ ಬಾಂಡ್‌ಗಳ ದುರ್ಬಳಕೆಗೆ ಹಿಂದಿನ ಘಟನೆಗಳನ್ನು ಉದಾಹರಣೆಯಾಗಿ ನೀಡಿದ ನೇಹಾ, ಸಿಜೆಪಿಯ ಅಭಿಜಿತ್ ದೀಪ್, ಸೌರಭ್ ದಾಸ್ ಮತ್ತು ಅಶುತೋಷ್ ಸೇರಿದಂತೆ ಹಲವು ಹೋರಾಟಗಾರರು ಈ ಹಿಂದೆ ಬಾಂಡ್‌ಗೆ ಸಹಿ ಹಾಕಿದ್ದರು ಎಂದು ತಿಳಿಸಿದ್ದಾರೆ.

ಆದರೆ, ಬಾಂಡ್‌ಗೆ ಸಹಿ ಹಾಕಿದ ಬಳಿಕವೂ ಪರಿಸ್ಥಿತಿ ಬದಲಾಗಲಿಲ್ಲ. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮನೆಯಿಂದ ಹೊರಬಂದ ತಕ್ಷಣ ಅವರನ್ನು ಬಂಧಿಸಲಾಯಿತು ಎಂದು ಹೇಳಿದ್ದಾರೆ.

ಬಾಂಡ್‌ಗೆ ಒಮ್ಮೆ ಸಹಿ ಹಾಕಿದರೆ, ಬಳಿಕ ಯಾವುದೇ ಶಾಂತಿಯುತ ಪ್ರತಿಭಟನೆ ನಡೆಸಿದರೂ ಬಂಧಿಸಿ ಜೈಲಿಗೆ ಕಳುಹಿಸಲು ಪೊಲೀಸರಿಗೆ ಸುಲಭವಾಗುತ್ತದೆ ಎಂಬುದು ನೇಹಾ ಅವರ ವಾದ. ಇಂತಹ ಬಾಂಡ್‌ಗೆ ಸಹಿ ಹಾಕುವುದು ಸಾಂವಿಧಾನಿಕ ಹಕ್ಕನ್ನು ನಾವೇ ಬಿಟ್ಟುಕೊಟ್ಟಂತೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಂಡಿ ಹೌಸ್‌ನಲ್ಲಿ ಪೊಲೀಸರ ದೌರ್ಜನ್ಯದ ಆರೋಪ

ಇತ್ತೀಚೆಗೆ ದಿಲ್ಲಿಯ ಮಂಡಿ ಹೌಸ್ ಬಳಿ ನಡೆದ ಘಟನೆಯನ್ನೂ ನೇಹಾ ಪ್ರಸ್ತಾಪಿಸಿದ್ದಾರೆ. ರಸ್ತೆಯ ಬದಿಯ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರನ್ನು ಕೇವಲ ಹತ್ತು ನಿಮಿಷಗಳಲ್ಲೇ ಪೊಲೀಸರು ವಶಕ್ಕೆ ಪಡೆದರು ಎಂದು ಹೇಳಿದ್ದಾರೆ.

ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಬ್ಯಾನರ್‌ ಗಳನ್ನು ಹಿಡಿದಿದ್ದರು. ಆದರೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಲಾಠಿ ಪ್ರಹಾರ ನಡೆಸಿದರು. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ, ಪತ್ರಕರ್ತರ ಮೇಲೂ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.

ಹಾಗಾದರೆ ಶಾಂತಿಭಂಗ ಮಾಡಿದ್ದು ನ್ಯಾಯಕ್ಕಾಗಿ ಧ್ವನಿ ಎತ್ತಿದ ಜನರೇ ಅಥವಾ ಬಲಪ್ರಯೋಗ ಮಾಡಿದ ಪೊಲೀಸರೇ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.

ಪೊಲೀಸರ ನೋಟಿಸ್ ಪ್ರಶ್ನಿಸಿ ಹೈಕೋರ್ಟ್‌ಗೆ

ದಿಲ್ಲಿಯ ಪೊಲೀಸರು ಜಾರಿ ಮಾಡಿರುವ ಶೋಕಾಸ್ ನೋಟಿಸ್ ಪ್ರಶ್ನಿಸಿ ನೇಹಾ ಬೋರಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪೊಲೀಸರ ನೋಟಿಸ್‌ನಲ್ಲಿ ತಪ್ಪು ಮಾಹಿತಿ ಮತ್ತು ಗೊಂದಲಗಳಿವೆ ಎಂದು ಅವರು ಹೇಳಿದ್ದಾರೆ.

ಕನ್ನಾಟ್ ಪ್ಲೇಸ್‌ನಲ್ಲಿ ಪ್ರತಿಭಟನೆ ನಡೆಸಿ ಶಾಂತಿ ಕದಡಲಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ವಿದ್ಯಾರ್ಥಿಗಳು ಎಂದಿಗೂ 'ಕನ್ನಾಟ್ ಪ್ಲೇಸ್ ಚಲೋ'ಗೆ ಕರೆ ನೀಡಿರಲಿಲ್ಲ. ಅವರ ಪ್ರತಿಭಟನೆ ನಡೆದದ್ದು ಮಂಡಿ ಹೌಸ್ ಬಳಿ ಮಾತ್ರ ಎಂದು ನೇಹಾ ಸ್ಪಷ್ಟಪಡಿಸಿದ್ದಾರೆ.

ಯಾವುದೇ ಹಿಂಸಾಚಾರ ನಡೆದಿಲ್ಲ, ಸಾರ್ವಜನಿಕ ಆಸ್ತಿಗೂ ಹಾನಿಯಾಗಿಲ್ಲ. ಆದರೂ, ಕೇವಲ ಅನುಮಾನದ ಆಧಾರದ ಮೇಲೆ ಶಾಂತಿ ಬಾಂಡ್ ಬರೆದುಕೊಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಖಾತರಿಪಡಿಸಿದೆ. ಆದರೆ, ಆಡಳಿತ ಯಂತ್ರವು ನೋಟಿಸ್ ಮತ್ತು ಬಾಂಡ್‌ಗಳ ಮೂಲಕ ಅದೇ ಹಕ್ಕನ್ನು ದಮನ ಮಾಡುತ್ತಿದೆ ಎಂದು ನೇಹಾ ಹೇಳಿದ್ದಾರೆ.

ಕಾನೂನಿನ ಪಾಲಕರು ಮತ್ತು ಸಂವಿಧಾನದ ರಕ್ಷಕರಾದ ನ್ಯಾಯಾಲಯಗಳು ಈ ವಿರೋಧಾಭಾಸವನ್ನು ಗಮನಿಸಿ, ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯಲಿವೆ ಎಂಬ ನಂಬಿಕೆ ತಮಗಿದೆ ಎಂದು ಅವರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi