Wednesday, 31 Oct, 11.24 am ವಾರ್ತಾಭಾರತಿ

ಕರಾವಳಿ
ಶಕ್ತಿ ಯೋಗ ಶಿಬಿರದ ಸಮಾರೋಪ ಸಮಾರಂಭ

ಮಂಗಳೂರು, ಅ.31: ಶಕ್ತಿನಗರದ ಶಕ್ತಿ ವಸತಿಯುತ ಶಾಲೆ, ಶಕ್ತಿ ಪ.ಪೂ. ಕಾಲೇಜು ಮತ್ತು ಗೋಪಾಲಕೃಷ್ಣ ದೇವಸ್ಥಾನದ ವತಿಯಿಂದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ನೇತೃತ್ವದಲ್ಲಿ 10 ದಿನಗಳಿಂದ ನಡೆಯುತ್ತಿರುವ ಯೋಗ ಶಿಬಿರದ ಸಮಾರೋಪ ಸಮಾರಂಭವು ಬುಧವಾರ ಸಂಜೆ ದೇವಸ್ಥಾನದ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ದ.ಕ. ಜಿಲ್ಲಾ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ ಶೆಣೈ ಮಾತನಾಡಿ, ಯೋಗ, ಪ್ರಾಣಾಯಾಮ, ಮುದ್ರೆಗಳ ಮೂಲಕ ತಾನು ಗಂಭೀರ ಅನಾರೋಗ್ಯವನ್ನು ಸ್ವತಃ ಪರಿಹರಿಸಿಕೊಂಡಿದ್ದೇನೆ ಎಂದು ಹೇಳಿದರು.

ಶರೀರಕ್ಕೆ ಬರುವ ಅನೇಕ ಕಾಯಿಲೆಗಳಿಗೆ ಯೋಗವೊಂದೇ ಪರಿಹಾರ. ಯೋಗದಿಂದ ದೀರ್ಘಾಯುಷ್ಯ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಶಕ್ತಿ ಶಾಲೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕತಿಯಿಂದ ಭಾರತದ ಮೌಲ್ಯ ಕಡಿಮೆಯಾಗಿತ್ತು. ಅಂತಹ ಸಂಸ್ಕೃತಿಯು ಯೋಗದಿಂದ ಮರು ಸ್ಥಾಪಿಸಲ್ಪಟ್ಟಿದೆ. ಇಂದು ಜಗತ್ತು ಯೋಗವನ್ನು ಒಪ್ಪಿಕೊಂಡು ತಮ್ಮ ಶಾಲೆಗಳಲ್ಲಿ ಪಠ್ಯದಲ್ಲಿ ಅಳವಡಿಸಿಕೊಳ್ಳುತ್ತವೆ ಎಂದು ಹೇಳಿರು.

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಮಾತನಾಡಿ, ರೋಗಮುುಕ್ತ ಸಮಾಜದ ನಿರ್ಮಾಣ ಯೋಗದಿಂದ ಸಾಧ್ಯ. ಇಂತಹ ಯೋಗವನ್ನು ದಿನನಿತ್ಯ ತಮ್ಮ ಜೀವನದಲ್ಲಿ ಅಳವಡಿಸಲು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾಕ್‌ವಹಿಸಿದ್ದರು. ಅಶ್ವಿತಾ ಎ.ಆರ್., ಸುನಿಲ್ ಅಂಗರಾಜೆ, ಆಶಾ, ಡಾ. ಈಶ್ವರ ಭಟ್ಟ್, ಮೋಹನ್ ಬಂಗೇರ ಹಾಗೂ ಜಯರಾಮ ತಮ್ಮ ಅನುಭವವನ್ನು ಹಂಚಿಕೊಂಡರು. ಒಟ್ಟು 75 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಯೋಗ ಗುರುಗಳು ಶಿಬಿರಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ವೇದಿಕೆಯಲ್ಲಿ ಶಕ್ತಿ ಎಜುಕೇಶನ್ ಟ್ರಸ್ಟ್‌ನ ಪ್ರಧಾನ ಸಲಹೆಗಾರ ರಮೇಶ್ ಕೆ. ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತಾಧಿಕಾರಿ ಕೃಷ್ಣ ಕುಮಾರ್ ಸ್ವಾಗತಿಸಿದರು. ಶಕ್ತಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರಭಾಕರ್ ಜಿ.ಎಸ್. ವಂದಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top