ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೇಶ್ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ನೇಮಕ ಮಾಡಿದೆ.
AICC ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಆಯ್ಕೆ ಪಟ್ಟಿ ಪ್ರಕಟಿಸಿದ್ದು,ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ 2023 ರ ಚುನಾವಣೆಯ ಅಭ್ಯರ್ಥಿಯಾಗಿದ್ದ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಹೆಚ್ ಸಿ ಯೋಗೇಶ್ ಅವರನ್ನು ನೇಮಕ ಮಾಡಿ ತಕ್ಷಣ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಪೈಪೋಟಿ ಏರ್ಪಟ್ಟಿತ್ತು.ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಸಂಸದ ಆಯನೂರು ಮಂಜುನಾಥ್, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್. ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಹಾಗೂ ಜಿಲ್ಲಾ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್ ಸೇರಿದಂತೆ ಹಲವು ಮುಖಂಡರ ಹೆಸರುಗಳು ಜಿಲ್ಲಾಧ್ಯಕ್ಷರ ರೇಸ್ ನಲ್ಲಿದ್ದವು. ಕೊನೆ ಸುತ್ತಿನಲ್ಲಿ ಹೈಕಮಾಂಡ್ ಹೆಚ್ ಸಿ ಯೋಗೇಶ್ ಅವರನ್ನು ನೇಮಕ ಮಾಡಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವೀಕ್ಷಕರಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಶರತ್ ಅವರು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬಲ್ಲ ನಾಯಕನ ಆಯ್ಕೆಗಾಗಿ ಅಭಿಪ್ರಾಯ ಪಡೆದ ಅವರು ಕಾರ್ಯಕರ್ತರ ಒಲವು ಮತ್ತು ಅಭಿಪ್ರಾಯದ ಆಧಾರದಲ್ಲಿ 6 ಮಂದಿಯ ಹೆಸರನ್ನು ಹೈಕಮಾಂಡ್‌ಗೆ ಸಲ್ಲಿಸಿದ್ದರು. ಈ ಬಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕವನ್ನು ಸಂಘಟನ್ ಸೃಜನ್ ಅಭಿಯಾನದ ಭಾಗವಾಗಿ ನಡೆಸಲಾಗಿದೆ ಎಂದು ಎಐಸಿಸಿ ತಿಳಿಸಿದೆ.

