ಶಿವಮೊಗ್ಗ: ಆಟವಾಡುತ್ತಾ ರಸ್ತೆಗೆ ಬಂದ ಬಾಲಕನಿಗೆ ಕಾರು ಢಿಕ್ಕಿಯಾದ ಪರಿಣಾಮ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಂಡುಗದ್ದೆ ಬಳಿ ರವಿವಾರ ನಡೆದಿದೆ.
ತ್ರಿಯಂಬಕಪುರ ಗ್ರಾ.ಪಂ. ವ್ಯಾಪ್ತಿಯ ಗುಡ್ಡೆಪಾಲ್ ಸಮೀಪದ ಗುಂಡುಗದ್ದೆಯ ಪ್ರಗತ್ ಎಂಬವರ ಪುತ್ರ ದೃಶ್ಯ (6) ಮೃತಪಟ್ಟ ಬಾಲಕ.
ಮನೆಯ ಪಕ್ಕದಲ್ಲಿ ಲಾರಿಯೊಂದು ನಿಂತಿತ್ತು. ಬಾಲಕ ಆಟವಾಡಲು ರಸ್ತೆಗೆ ಬಂದಿದ್ದು, ಲಾರಿ ಇದ್ದ ಕಾರಣ ಬಾಲಕ ಕಾಣದೆ ರಸ್ತೆಯಲ್ಲಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ.
ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಕರೆ ತಂದರೂ ಅಷ್ಟರಲ್ಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

