Dailyhunt Logo
  • Light mode
    Follow system
    Dark mode
    • Play Story
    • App Story
ಶಿವಮೊಗ್ಗದಲ್ಲಿ ಸೈದ್ಧಾಂತಿಕ ಸಂಘಟನೆ ಬಲವರ್ಧನೆಯೇ ನಮ್ಮ ಸಂಕಲ್ಪ: ಬಿ.ಕೆ. ಹರಿಪ್ರಸಾದ್

ಶಿವಮೊಗ್ಗದಲ್ಲಿ ಸೈದ್ಧಾಂತಿಕ ಸಂಘಟನೆ ಬಲವರ್ಧನೆಯೇ ನಮ್ಮ ಸಂಕಲ್ಪ: ಬಿ.ಕೆ. ಹರಿಪ್ರಸಾದ್

ಶಿವಮೊಗ್ಗ, ಅ.24: "ಕ್ರಾಂತಿಕಾರಿ ಪರಂಪರೆಯ ಶಿವಮೊಗ್ಗದಲ್ಲಿ ಸೈದ್ಧಾಂತಿಕ ಸಂಘಟನೆ ಬಲವರ್ಧನೆಯೇ ನಮ್ಮ ಸಂಕಲ್ಪ" ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶನಿವಾರ ಭೇಟಿ ನೀಡಿದ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

"ಸ್ವಾತಂತ್ರ್ಯ ಹೋರಾಟದ ಉಜ್ವಲ ಪರಂಪರೆ ಹೊಂದಿರುವ ಶಿವಮೊಗ್ಗ ಜಿಲ್ಲೆ ಕ್ರಾಂತಿಕಾರಿ ಹೋರಾಟಗಳು ಹಾಗೂ ಸಮಾಜವಾದಿ ಚಿಂತನೆಗಳಿಗೆ ಹೆಸರಾದ ನೆಲ. ಆದರೆ, ಸಮಾಜವಾದಿ ವಿಚಾರಧಾರೆಗೆ ಭದ್ರ ನೆಲೆಯಾಗಿದ್ದ ಜಿಲ್ಲೆ ಇಂದು ಕೋಮುವಾದದತ್ತ ವಾಲುತ್ತಿರುವುದು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರವಾಗಿದೆ" ಎಂದು ಅವರು ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನಾತ್ಮಕವಾಗಿ ಬಲಿಷ್ಠವಾಗಿದೆ. ಈ ಶಕ್ತಿಯನ್ನು ತಳಮಟ್ಟದಲ್ಲಿ ಸೈದ್ಧಾಂತಿಕವಾಗಿ ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಕೋಮುವಾದಿ ರಾಜಕಾರಣವನ್ನು ಎದುರಿಸಬೇಕಿದೆ. ಶಿಕಾರಿಪುರದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಸ್ಮರಣಾರ್ಥ ನಡೆದ ಜನತಾ ಜೋಡೋ ಕಾರ್ಯಕ್ರಮದ ಯಶಸ್ಸೇ ಜಿಲ್ಲೆಯ ಕಾಂಗ್ರೆಸ್ ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ" ಎಂದು ತಿಳಿಸಿದರು.

"ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ತೀರ್ಮಾನದಂತೆ 'ಮತ ಉಳಿಸಿ - ದೇಶ ಉಳಿಸಿ' ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕಿದೆ. ಮತದಾನದ ಹಕ್ಕು, ಸಂವಿಧಾನದ ಆಶಯಗಳು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ" ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi