ಶಿವಮೊಗ್ಗ : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಡಳಿದ ಬಗ್ಗೆ ಅಸಮಾಧಾನವಿದ್ದರೆ ರಾಜ್ಯ ಉಸ್ತುವಾರಿಯವರಿಗೆ ಪಕ್ಷದ ಶಾಸಕರುಗಳು ದೂರು ನೀಡಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಹೇಳುವವರು ಕೇಳುವವರು ಇದ್ದಾರೆ. ಹಾಗಾಗಿಯೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಬುಧವಾರ ಎಲ್ಲಾ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ಗುರುವಾರ ನಮ್ಮ ಶಾಸಕರೊಂದಿಗೆ ಅರುಣ್ ಸಿಂಗ್ ಮಾತನಾಡಲಿದ್ದಾರೆ. ಅಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪರ-ವಿರುದ್ಧದ ಅನಿಸಿಕೆ, ದೂರುಗಳು ಹೇಳಿಕೊಳ್ಳಲು ಅವಕಾಶವಿದೆ ಎಂದರು.
ನಮ್ಮದೇನು ಕಾಂಗ್ರೆಸ್ ಹಾಗೆ ಕೆಟ್ಟು ಹೋದ ಪಕ್ಷವಲ್ಲ.
ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ಪಕ್ಷವಾಗಿದೆ. ನಮ್ಮ ಪಕ್ಷದಲ್ಲಿ ಹೇಳುವವರು ಕೇಳುವವರು ಇದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ ಪಾರ್ಟಿಯಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಹೇಳೋರು ಕೇಳೋರು ಯಾರು ಇಲ್ಲ. ಅಲ್ಲಿ ಝಮೀರ್ ಅಹ್ಮದ್ ಸಿದ್ದರಾಮಯ್ಯನವರನ್ನು ಸಿಎಂ ಮಾಡಲು ನಾನು ಕ್ಷೇತ್ರ ಬಿಟ್ಟುಕೊಡುತ್ತೇನೆ ಎಂದು ಹೇಳುತ್ತಾರೆ. ಇಂತಂಹ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಅವರ ಒಪ್ಪಿಗೆ ಇದೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಝಮೀರ್ ಅಹ್ಮದ್ ಅವರೇ ಬಿ ಫಾರಂ ಕೊಟ್ಟು ಅವರೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆಯೇ? ಇದನ್ನೆಲ್ಲಾ ನೋಡಿಕೊಂಡು ಡಿ.ಕೆ. ಶಿವಕುಮಾರ್ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಅವರ ಪಕ್ಷದ ಹುಳುಕುಗಳನ್ನು ಮುಚ್ಚಿಟ್ಟುಕೊಳ್ಳಲು ಬಿಜೆಪಿ ಮೇಲೆ ಆರೋಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇದನ್ನು ಸಹಿಸಿಕೊಳ್ಳದೇ ಗೂಬೆ ಕೂರಿಸಲು ಡಿ.ಕೆ. ಶಿವಕುಮಾರ್ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದರು.

