Monday, 25 Jan, 12.01 am ವಾರ್ತಾಭಾರತಿ

ಮುಖಪುಟ
ಸೋಲಾರ್ ಹಗರಣದ ಪ್ರಧಾನ ಆರೋಪಿಯ ಲೈಂಗಿಕ ದೌರ್ಜನ್ಯ ಪ್ರಕರಣ: ಸಿಬಿಐಗೆ ಹಸ್ತಾಂತರಿಸಲು ಕೇರಳ ಸರಕಾರ ನಿರ್ಧಾರ

ತಿರುವನಂತಪುರ, ಜ. 24: ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ರಾಜ್ಯದ ಸೋಲಾರ್ ಹಗರಣದ ಪ್ರಧಾನ ಆರೋಪಿ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಇತರ ಐವರ ವಿರುದ್ಧ ದಾಖಲಿಸಿದ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಎಲ್‌ಡಿಎಫ್ ಸರಕಾರ ನಿರ್ಧರಿಸಿದೆ.

ರಾಜ್ಯ ಸರಕಾರದ ಈ ನಡೆಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿರುವ ಪ್ರತಿಪಕ್ಷ ಕಾಂಗ್ರೆಸ್, ರಾಜ್ಯ ಸರಕಾರಕ್ಕೆ ಕಳೆದ ಐದು ವರ್ಷಗಳಲ್ಲಿ ಪಕ್ಷದ ನಾಯಕರ ವಿರುದ್ಧ ಯಾವುದನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಚುನಾವಣೆ ಸಮೀಪಿಸುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದೆ. ''ತಾನು ಯಾವುದೇ ತನಿಖೆಗೆ ಸಿದ್ಧ'' ಎಂದು ಉಮ್ಮನ್ ಚಾಂಡಿ ಹೇಳಿದ್ದಾರೆ.

ಈ ನಡೆಯ ಕುರಿತಂತೆ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ವಿ. ಮುರಳೀಧರನ್, ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವ ನಿರ್ಧಾರವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ರಾಜ್ಯ ಸರಕಾರದ ನಡೆಯನ್ನು ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ತಿರುವನಂತಪುರದ ಸೆಕ್ರೇಟರಿಯೇಟ್‌ಗೆ ರ‍್ಯಾಲಿ

ನಡೆಸಿದ್ದಾರೆ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರತಿಕೃತಿ ದಹಿಸಿದ್ದಾರೆ.

ಆದರೆ, ಈ ನಡೆ ರಾಜಕೀಯ ಪ್ರೇರಿತ ಎಂಬ ಆರೋಪವನ್ನು ತಿರಸ್ಕರಿಸಿರುವ ಸಿಪಿಎಂನ ರಾಜ್ಯ ಉಸ್ತುವಾರಿ ಕಾರ್ಯದರ್ಶಿ ವಿಜಯರಾಘವನ್, ಇದು ದೂರುದಾರೆಗೆ ನ್ಯಾಯ ಒದಗಿಸುವ ಸಹಜ ಕ್ರಮವಾಗಿದೆ ಎಂದಿದ್ದಾರೆ.

ಈ ಹಿಂದಿನ ಯುಡಿಎಫ್ ಸರಕಾರದ ಅಧಿಕಾರದ ಅವಧಿಯಲ್ಲಿ ಬಹುಕೋಟಿ ಸೋಲಾರ್ ಹಗರಣದ ಪ್ರಧಾನ ಆರೋಪಿ 2012ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಉಮ್ಮ ಚಾಂಡಿ ಸೇರಿದಂತೆ 6 ಮಂದಿ ಆರೋಪಿಗಳಾಗಿದ್ದರು. ರಾಜ್ಯ ಪೊಲೀಸ್‌ನ ಕ್ರೈಮ್ ಬ್ರಾಂಚ್ ಈ ಪ್ರಕರಣದ ತನಿಖೆ ನಡೆಸುತ್ತಿತ್ತು.

ಎಪ್ರಿಲ್ ಮೇಯಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾದ ರಾಜ್ಯ ವಿಧಾನ ಸಬೆ ಚುನಾವಣೆಯಲ್ಲಿ ಪಕ್ಷದ 10 ಸದಸ್ಯರ ಚುನಾವಣಾ ನಿರ್ವಹಣಾ ಸಮಿತಿಯ ಮುಖ್ಯಸ್ಥರಾಗಿ ಇತ್ತೀಚೆಗೆ ನಿಯೋಜಿತರಾದ ಉಮ್ಮನ್ ಚಾಂಡಿ ಹಾಗೂ ಕಾಂಗ್ರೆಸ್ ಸಂಸದರಾದ ಕೆ.ಸಿ. ವೇಣುಗೋಪಾಲ್, ಹಿಬಿ ಈಡನ್, ಅಡೂರ್ ಪ್ರಕಾಶ್, ಶಾಸಕ ಅನಿಲ್ ಕುಮಾರ್ ಹಾಗೂ ಬಿಜೆಪಿ ನಾಯಕ ಎ.ಪಿ. ಅಬ್ದುಲ್ಲಾ ಕುಟ್ಟಿ ಈ ಪ್ರಕರಣದ ಇತರ 6 ಮಂದಿ ಆರೋಪಿಗಳು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top