Dailyhunt Logo
  • Light mode
    Follow system
    Dark mode
    • Play Story
    • App Story

Somwarpet | ಎಸ್‌ಬಿಐ ಎಟಿಎಂ ದರೋಡೆಗೆ ವಿಫಲ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಟಿಎಂ ದರೋಡೆಗೆ ಕಳ್ಳರು ವಿಫಲ ಯತ್ನ ನಡೆಸಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಶುಕ್ರವಾರ ರಾತ್ರಿ ಸುಮಾರು 2.05 ಗಂಟೆ ವೇಳೆಗೆ ಕಾರಿನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಬ್ಯಾಂಕ್ ಕಟ್ಟಡಕ್ಕೆ ಹೊಂದಿಕೊಂಡಿರುವ ಎಟಿಎಂಗೆ ನುಗ್ಗಿ, ಕಬ್ಬಿಣದ ಸಲಾಕೆಯಿಂದ ಎಟಿಎಂ ಯಂತ್ರದ ಮೇಲ್ಭಾಗದ ಕವಚವನ್ನು ಬಲವಂತವಾಗಿ ಕಳಚಿದ್ದಾರೆ.

ಇನ್ನೊಂದು ಪದರವನ್ನು ಒಡೆಯುವ ವೇಳೆ ಯಾರೋ ಬರುತ್ತಿರುವ ಅನುಮಾನ ಮೂಡುತ್ತಿದ್ದಂತೆಯೇ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಎಟಿಎಂ ಒಡೆಯಲು ಯತ್ನಿಸಿದ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

15 ದಿನಗಳ ಹಿಂದೆಯೂ ಮನೆ ಕಳ್ಳತನ :

ಇದು ಅಲ್ಲದೇ ಸುಮಾರು 15 ದಿನಗಳ ಹಿಂದೆ ಪಟ್ಟಣದ ಬಾಣವಾರ ರಸ್ತೆಯಲ್ಲಿರುವ ಮೂಡಲಗಿರಿ ನಿವಾಸದಲ್ಲಿ ಮನೆ ಕಳ್ಳತನ ನಡೆದಿತ್ತು. ಮನೆಯವರು ಇಲ್ಲದ ಸಮಯವನ್ನು ದುರುಪಯೋಗಪಡಿಸಿಕೊಂಡ ಕಳ್ಳರ ತಂಡ ಹಿಂಬಾಗಿಲಿನ ಬೀಗ ಒಡೆದು ಒಳನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿತ್ತು.

ಕಳ್ಳರು ಸುಮಾರು 50 ಗ್ರಾಂ ಬೆಳ್ಳಿಯ ಗಣಪತಿ, ಸರಸ್ವತಿ ಹಾಗೂ ಲಕ್ಷ್ಮೀ ವಿಗ್ರಹಗಳು, 60 ಗ್ರಾಂ ತೂಕದ ಎರಡು ಜೋಡಿ ಬೆಳ್ಳಿ ದೀಪಗಳು, 50 ಗ್ರಾಂ ಕುಂಕುಮದ ಬಟ್ಟಲು, 20 ಗ್ರಾಂ ಬೆಳ್ಳಿಯ ಕಾಲುಚೈನ್ ಹಾಗೂ 20 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧವೂ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನರಲ್ಲಿ ಹೆಚ್ಚಿದ ಆತಂಕ :

ಕಳೆದ ಕೆಲ ದಿನಗಳಿಂದ ಪಟ್ಟಣದಲ್ಲಿ ಮನೆ ಕಳ್ಳತನ ಹಾಗೂ ದರೋಡೆ ಯತ್ನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಕಳ್ಳರ ಪತ್ತೆ ಹಾಗೂ ರಾತ್ರಿ ಗಸ್ತು ಬಿಗಿಗೊಳಿಸುವಂತೆ ಸ್ಥಳೀಯರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi