ಹೊಸದಿಲ್ಲಿ, ಎ.4: ಸ್ಯಾಫ್ ಅಂಡರ್-20 ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವು ನಿಗದಿತ ಸಮಯದಲ್ಲಿ ಗೋಲುರಹಿತವಾಗಿ ಅಂತ್ಯಗೊಂಡ ನಂತರ ಭಾರತೀಯ ಅಂಡರ್-20 ಪುರುಷರ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಅಂತರದಿಂದ ಮಣಿಸಿರುವ ಬಾಂಗ್ಲಾದೇಶ ತಂಡವು ಎರಡನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಶುಕ್ರವಾರ ಮಾಲೆಯ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಸ್ಯಾಫ್ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಅಂತಿಮವಾಗಿ ರೋಚಕ ಜಯ ಸಾಧಿಸಿದ ಬಾಂಗ್ಲಾದೇಶವು ಪ್ರಶಸ್ತಿ ಎತ್ತಿ ಹಿಡಿಯಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತದ ಪರ ಮುಹಮ್ಮದ್ ಅರ್ಬಾಶ್, ಸ್ಯಾಮ್ಸನ್ ಹಾಗೂ ವಿಶಾಲ್ ಯಾದವ್ ತಲಾ ಒಂದು ಗೋಲು ಗಳಿಸಿದರು.
ಬಾಂಗ್ಲಾದೇಶದ ಪರ ಮುರ್ಷಿದ್‌ಅಲಿ, ಚಂದನ್‌ರಾಯ್, ಮುಹಮ್ಮದ್ ಯೂಸುಫ್ ಅಲಿ ಹಾಗೂ ರೋನನ್ ಸುಲಿವನ್ ತಲಾ ಒಂದು ಗೋಲು ಗಳಿಸಿದರು.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ತಾಳ್ಮೆಯಿಂದ ಆಡಿದ್ದು, ರಕ್ಷಣಾತ್ಮಕ ಅಟಕ್ಕೆ ಒತ್ತು ನೀಡಿದವು. ಹೀಗಾಗಿ ಮೊದಲಾರ್ಧದಲ್ಲಿ ಅವಕಾಶಗಳು ಸೀಮಿತವಾಗಿದ್ದವು.
ಭಾರತವು 32ನೇ ನಿಮಿಷದಲ್ಲಿ ಗೋಲು ಗಳಿಸುವ ಅವಕಾಶ ಪಡೆದಿತ್ತು. ಆದರೆ ಬಾಂಗ್ಲಾದೇಶದ ಗೋಲ್‌ಕೀಪರ್ ಮುಹಮ್ಮದ್ ಇಸ್ಮಾಯೀಲ್ ಚೆಂಡನ್ನು ತಡೆದರು.
ದ್ವಿತೀಯಾರ್ಧದಲ್ಲೂ ಉಭಯ ತಂಡಗಳು ತೀವ್ರ ಪೈಪೋಟಿ ನಡೆಸಿದವು. ಭಾರತವು 83ನೇ ನಿಮಿಷದಲ್ಲಿ ಮತ್ತೊಂದು ಅವಕಾಶ ಪಡೆಯಿತು. ಬದಲಿ ಆಟಗಾರ ರಿಷಿ ಸಿಂಗ್ ಅವರು ಗೋಲು ಗಳಿಸಲು ಯತ್ನಿಸಿದರು. ಆದರೆ ಮುಹಮ್ಮದ್ ಯೂಸುಫ್ ಅಲಿ ಮತ್ತೊಮ್ಮೆ ಬಾಂಗ್ಲಾದೇಶವನ್ನು ರಕ್ಷಣೆ ಮಾಡಿದರು.
ಭಾರತದ ಒಮಾಂಗ್ ಡೊಡುಮ್ 2026ರ ಆವೃತ್ತಿಯ ಸ್ಯಾಫ್ ಅಂಡರ್-20 ಚಾಂಪಿಯನ್‌ಶಿಪ್‌ನ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಗೆ ಆಯ್ಕೆಯಾದರು. ಮೂರು ಗೋಲುಗಳನ್ನು ಗಳಿಸುವ ಮೂಲಕ ಪಂದ್ಯಾವಳಿಯ ಜಂಟಿ ಅಗ್ರ ಸ್ಕೋರರ್ ಎನಿಸಿಕೊಂಡರು.

