Dailyhunt Logo
  • Light mode
    Follow system
    Dark mode
    • Play Story
    • App Story
ತಿಲಕ್-ನಿತೀಶ್ ಅಬ್ಬರಕ್ಕೆ ಶರಣಾದ ಕಿವೀಸ್‌: ಕೊನೆಯ ಓವರ್‌ ನಲ್ಲಿ ಭಾರತಕ್ಕೆ ರೋಚಕ ಜಯ!

ತಿಲಕ್-ನಿತೀಶ್ ಅಬ್ಬರಕ್ಕೆ ಶರಣಾದ ಕಿವೀಸ್‌: ಕೊನೆಯ ಓವರ್‌ ನಲ್ಲಿ ಭಾರತಕ್ಕೆ ರೋಚಕ ಜಯ!

ಕ್ರೈಸ್ಟ್‌ಚರ್ಚ್: ಸೋಲಿನ ಸುಳಿಗೆ ಸಿಲುಕಿದ್ದ ಭಾರತ ತಂಡವನ್ನು ತಿಲಕ್ ವರ್ಮಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಗೆಲುವಿನ ದಡ ಸೇರಿಸಿದರು. ನ್ಯೂಝಿಲೆಂಡ್‌ನ ಸ್ಪಿನ್ ದಾಳಿಗೆ ತತ್ತರಿಸಿದ್ದ ಭಾರತ, ಕೊನೆಯ ಹಂತದಲ್ಲಿ ತಿರುಗೇಟು ನೀಡಿ ಎರಡನೇ ಟಿ20 ಪಂದ್ಯದಲ್ಲಿ 4 ವಿಕೆಟ್‌ ಗಳ ರೋಚಕ ಜಯ ಸಾಧಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್ ನೀಡಿದ್ದ 181 ರನ್‌ ಗಳ ಗುರಿಯನ್ನು ಭಾರತ 19.5 ಓವರ್‌ ಗಳಲ್ಲಿ 6 ವಿಕೆಟ್ ಕಳೆದುಕೊಂಡು ತಲುಪಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿತು.

ತಿಲಕ್ ಅರ್ಧಶತಕದ ಮಿಂಚು

ಭಾರತದ ಗೆಲುವಿನ ರೂವಾರಿ ತಿಲಕ್ ವರ್ಮಾ. ಕೇವಲ 26 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 51 ರನ್ ಗಳಿಸಿದ ಅವರು, ಒತ್ತಡದ ಸಂದರ್ಭದಲ್ಲಿ ತಾಳ್ಮೆ ಮತ್ತು ಆಕ್ರಮಣಕಾರಿ ಆಟದ ಸಮನ್ವಯ ಪ್ರದರ್ಶಿಸಿದರು. ನಿತೀಶ್ ಕುಮಾರ್ ರೆಡ್ಡಿ 13 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ನಮನ್ ಧೀರ್ 17 ಎಸೆತಗಳಲ್ಲಿ 31 ರನ್ ಗಳಿಸಿ ತಂಡದ ಹೋರಾಟಕ್ಕೆ ಬಲ ತುಂಬಿದರು.

ಅಮೋಘ ಆಟ ಪ್ರದರ್ಶಿಸಿದ ತಿಲಕ್ ವರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಯಾಂಟ್ನರ್ ಸ್ಪಿನ್‌ ಗೆ ತತ್ತರಿಸಿದ ಭಾರತ

181 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಹಿನ್ನಡೆಯಾಯಿತು. ಸಂಜು ಸ್ಯಾಮ್ಸನ್ 14, ವೈಭವ್ ಸೂರ್ಯವಂಶಿ 4, ಅಭಿಷೇಕ್ ಶರ್ಮಾ 27, ನಾಯಕ ಶ್ರೇಯಸ್ ಅಯ್ಯರ್ 7 ಹಾಗೂ ಅಕ್ಷರ್ ಪಟೇಲ್ 11 ರನ್ ಗಳಿಸಿ ಔಟಾದರು.

ನ್ಯೂಝಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ 21 ರನ್ ನೀಡಿ 4 ವಿಕೆಟ್ ಕಬಳಿಸಿ ಭಾರತದ ಬ್ಯಾಟಿಂಗ್ ಬೆನ್ನೆಲುಬಿಗೆ ಹೊಡೆತ ನೀಡಿದರು. 70 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಕೊನೆಯ 30 ಎಸೆತಗಳಲ್ಲಿ 68 ರನ್‌ಗಳ ಅಗತ್ಯವಿತ್ತು. ಈ ಹಂತದಲ್ಲಿ ನ್ಯೂಝಿಲೆಂಡ್ ಗೆಲುವಿನತ್ತ ಸಾಗುವ ವಿಶ್ವಾಸದಲ್ಲಿತ್ತು.

ಆದರೆ, ತಿಲಕ್ ವರ್ಮಾ ಮತ್ತು ನಮನ್ ಧೀರ್ ತಂಡವನ್ನು ಸಂಕಷ್ಟದಿಂದ ಹೊರತರುವ ಪ್ರಯತ್ನ ಮಾಡಿದರು. ನಮನ್ ಔಟಾದ ಬಳಿಕ ಕ್ರೀಸ್‌ ಗೆ ಬಂದ ನಿತೀಶ್ ರೆಡ್ಡಿ, ತಿಲಕ್‌ಗೆ ಸಾಥ್ ನೀಡಿದರು. ಈ ಜೋಡಿಯ ಆಕ್ರಮಣಕಾರಿ ಆಟದಿಂದ ಪಂದ್ಯದ ಚಿತ್ರಣ ಬದಲಾಯಿತು. ಅಂತಿಮ ಹಂತದಲ್ಲಿ ನ್ಯೂಝಿಲೆಂಡ್ ಬೌಲರ್‌ ಗಳು ಒತ್ತಡಕ್ಕೆ ಸಿಲುಕಿದರು. ಭಾರತ ಕೊನೆಯ ಎಸೆತಕ್ಕೂ ಮುನ್ನ ಗುರಿ ತಲುಪಿತು.

ಫಿಲಿಪ್ಸ್-ಜಾಕೋಬ್ಸ್ ಜುಗಲ್‌ ಬಂದಿ

ಇದಕ್ಕೂ ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ, ನ್ಯೂಝಿಲೆಂಡ್ ತಂಡವನ್ನು 20 ಓವರ್‌ಗಳಲ್ಲಿ 5 ವಿಕೆಟ್‌ಗೆ 180 ರನ್‌ಗಳಿಗೆ ನಿಯಂತ್ರಿಸಿತು.

ಆರಂಭದಲ್ಲಿ ಭಾರತದ ಬೌಲರ್‌ ಗಳು ಉತ್ತಮ ಪ್ರದರ್ಶನ ನೀಡಿದರೂ, ಗ್ಲೆನ್ ಫಿಲಿಪ್ಸ್ ಮತ್ತು ಬೆವನ್ ಜಾಕೋಬ್ಸ್ 116 ರನ್‌ ಗಳ ಜೊತೆಯಾಟವಾಡಿ ಆತಿಥೇಯ ತಂಡಕ್ಕೆ ಚೇತರಿಕೆ ನೀಡಿದರು. ಫಿಲಿಪ್ಸ್ ಆಕ್ರಮಣಕಾರಿ ಆಟವಾಡಿದರೆ, ಜಾಕೋಬ್ಸ್ ಕೂಡ ಉತ್ತಮ ಸಾಥ್ ನೀಡಿದರು. ಜಾಕೋಬ್ಸ್ 18 ರನ್ ಗಳಿಸಿದ್ದಾಗ ಶ್ರೇಯಸ್ ಅಯ್ಯರ್ ಅವರ ಕ್ಯಾಚ್ ಕೈಬಿಟ್ಟಿದ್ದರಿಂದ ಜೀವದಾನ ಪಡೆದರು.

ಅಯ್ಯರ್ ಮೆಚ್ಚುಗೆ; ಸ್ಯಾಂಟ್ನರ್‌ ಗೆ ನಿರಾಸೆ

ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್, ತಂಡದ ಪ್ರತಿಯೊಬ್ಬ ಆಟಗಾರನೂ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ ಎಂದರು. ಸತತ ವಿಕೆಟ್‌ ಗಳನ್ನು ಕಳೆದುಕೊಂಡ ಬಳಿಕ ತಿಲಕ್ ವರ್ಮಾ ಮತ್ತು ನಿತೀಶ್ ರೆಡ್ಡಿ ತೋರಿದ ಮನೋಸ್ಥೈರ್ಯವನ್ನು ಶ್ಲಾಘಿಸಿದರು. ನಮನ್ ಧೀರ್ ಅವರ ಕೊಡುಗೆಯನ್ನೂ ಮೆಚ್ಚಿದರು.

ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್, ಅಂತಿಮ ಹಂತದಲ್ಲಿ ತಿಲಕ್, ನಮನ್ ಮತ್ತು ನಿತೀಶ್ ಅವರ ಆಕ್ರಮಣಕಾರಿ ಆಟವನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದರು. ಆರಂಭದಲ್ಲಿ ಬೌಲಿಂಗ್ ಉತ್ತಮವಾಗಿದ್ದರೂ, ಒಂದೆರಡು ನೋಬಾಲ್‌ ಗಳು ಹಿನ್ನಡೆ ಉಂಟುಮಾಡಿದವು ಎಂದು ಹೇಳಿದರು. ಮ್ಯಾಟ್ ಹೆನ್ರಿ ಮತ್ತು ಲಾಕಿ ಫರ್ಗುಸನ್ ಮೈದಾನದಿಂದ ಹೊರಹೋದ ಹಿನ್ನೆಲೆಯಲ್ಲಿ ಮುಂದಿನ ಪಂದ್ಯದಲ್ಲಿ ಆಟಗಾರರನ್ನು ಬದಲಾಯಿಸಿ ಆಡಿಸುವ ಬಗ್ಗೆ ಯೋಚಿಸುವುದಾಗಿ ತಿಳಿಸಿದರು.

300ನೇ ಟಿ20 ಪಂದ್ಯದಲ್ಲಿ 200ನೇ ಗೆಲುವು

ಭಾರತ ತಂಡದ ಪಾಲಿಗೆ ಈ ಗೆಲುವು ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ತನ್ನ 300ನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡಿದ ಭಾರತ, 200ನೇ ಗೆಲುವು ದಾಖಲಿಸಿತು. ಪಂದ್ಯದ ಬಹುಭಾಗದಲ್ಲಿ ಮೇಲುಗೈ ಸಾಧಿಸಿದ್ದ ನ್ಯೂಝಿಲೆಂಡ್ ಅಂತಿಮ ಹಂತದಲ್ಲಿ ನಿಯಂತ್ರಣ ಕಳೆದುಕೊಂಡಿತು.

ಆರು ವಿಕೆಟ್‌ ಗಳು ಪತನಗೊಂಡು ಗೆಲುವು ಕಠಿಣವಾಗಿದ್ದರೂ, ತಿಲಕ್ ವರ್ಮಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರ ಹೋರಾಟ ಭಾರತಕ್ಕೆ ಜಯ ತಂದುಕೊಟ್ಟಿತು. ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi