ಹೊಸದಿಲ್ಲಿ, ಜು. 4: ತ್ರಿಬಲ್ ಎಂಜಿನ್ ಸರಕಾರದ ಅಡಿಯಲ್ಲಿ ದೇಶ ಮತ ಕಳ್ಳತನ, ಸೀಟು ಕಳ್ಳತನ ಮತ್ತು ದೇಣಿಗೆ ಕಳ್ಳತನಕ್ಕೆ ಸಾಕ್ಷಿಯಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಶನಿವಾರ ಆರೋಪಿಸಿದ್ದಾರೆ.
ಚುನಾವಣಾ ಆಯೋಗವು ಮತಗಳು ಮತ್ತು ಸೀಟುಗಳ ಕಳ್ಳತನಕ್ಕೆ ಅವಕಾಶ ಮಾಡಿಕೊಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮತ್ತು ಅದರ ಪಕ್ಷಪಾತದ ಕಾರ್ಯವೈಖರಿಯ ಕುರಿತು ಇಂಡಿಯಾ ಮೈತ್ರಿಕೂಟ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದೆ. ಈ ಪತ್ರ ದೇಶದ ಚುನಾವಣಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸ ತೀವ್ರವಾಗಿ ಕುಸಿದಿರುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಚುನಾವಣಾ ಫಲಿತಾಂಶಗಳು ಮೊದಲೇ ನಿಗದಿಯಾಗಿರುತ್ತವೆ ಎಂದು ಜನರು ನಂಬುವಂತಾಗಿದೆ. ನಮ್ಮ ಸಂವಿಧಾನ ಮತ್ತು ಚುನಾವಣಾ ವ್ಯವಸ್ಥೆಯ ಮೇಲೆ ದಾಳಿ ನಡೆಯುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಚುನಾವಣಾ ಫಲಿತಾಂಶಗಳು ಮುಂಚಿತವಾಗಿಯೇ ನಿರ್ಧರಿಸಲ್ಪಟ್ಟರೆ, ಚುನಾವಣೆ ನಡೆಸುವುದರಲ್ಲಿ ಏನು ಅರ್ಥವಿದೆ? ಎಂದು ಅವರು ಪ್ರಶ್ನಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಗುರಿಯಾಗಿರಿಸಿಕೊಂಡು ಮಾತನಾಡಿದ ಜೈರಾಮ್ ರಮೇಶ್, ಅವರು ಕಪಟತನ ಪ್ರದರ್ಶಿಸುತ್ತಿದ್ದಾರೆ. ಚುನಾವಣಾ ಆಯೋಗ ಕೇಂದ್ರ ಸರಕಾರದ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಜ್ಞಾನೇಶ್ ಕುಮಾರ್ ಅವರು ಕಪಟತನದ ಕಾಯಿಲೆಯಿಂದ ಬಳಲುತ್ತಿರುವಂತೆ ತೋರುತ್ತಿದೆ. ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಅವರ ನಡವಳಿಕೆಯಲ್ಲಿ ಚುನಾವಣಾ ಆಯೋಗವು ಗೃಹ ಸಚಿವರು ಮತ್ತು ಪ್ರಧಾನಿ ಅವರಿಂದ ಆದೇಶಗಳನ್ನು ಪಡೆಯುತ್ತದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.
ಆಮ್ ಆದ್ಮಿ ಪಕ್ಷ ಮತ್ತು ಡಿಎಂಕೆ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' ಪ್ರಕ್ರಿಯೆ ಮತ್ತು ಇತರ ಚುನಾವಣೆ ಸಂಬಂಧಿತ ವಿಷಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದ ಬೆನ್ನಲ್ಲೇ ಜೈರಾಮ್ ರಮೇಶ್ ಈ ಹೇಳಿಕೆ ನೀಡಿದ್ದಾರೆ.

