Dailyhunt Logo
  • Light mode
    Follow system
    Dark mode
    • Play Story
    • App Story
ತ್ರಿಕೋನ ಏಕದಿನ ಸರಣಿ | ಶ್ರೀಲಂಕಾ 'ಎ' ವಿರುದ್ಧ ಭಾರತ 'ಎ' ತಂಡಕ್ಕೆ ರೋಚಕ ಜಯ

ತ್ರಿಕೋನ ಏಕದಿನ ಸರಣಿ | ಶ್ರೀಲಂಕಾ 'ಎ' ವಿರುದ್ಧ ಭಾರತ 'ಎ' ತಂಡಕ್ಕೆ ರೋಚಕ ಜಯ

ಡಾಂಬುಲ್ಲಾ, ಜೂ. 9: ತ್ರಿಕೋನ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ 'ಎ' ತಂಡವನ್ನು ಎಂಟು ರನ್ಗಳ ಅಂತರದಿಂದ ರೋಚಕವಾಗಿ ಮಣಿಸಿದ ಭಾರತ 'ಎ' ತಂಡ ಶುಭಾರಂಭ ಮಾಡಿದೆ.

ಭಾರತ 'ಎ' ತಂಡದ ಪರ ಮೊದಲ ಪಂದ್ಯ ಆಡಿದ ವೈಭವ್ ಸೂರ್ಯವಂಶಿ ಕೇವಲ 14 ರನ್ ಗಳಿಸಿ ನಿರಾಶೆಗೊಳಿಸಿದರು.

ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 278 ರನ್ ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ 'ಎ' ತಂಡ 48.5 ಓವರ್ ಗಳಲ್ಲಿ 269 ರನ್ ಗಳಿಸಿ ಆಲೌಟ್ ಆಯಿತು. ಲಂಕಾ ತಂಡದ ಪರ ನಾಯಕ ಸಹಾನ್ ಅರಾಚಿಗೆ 72 ಎಸೆತಗಳಲ್ಲಿ 74 ರನ್ ಗಳಿಸಿದರು. ಆದರೆ, ತಂಡವು ಕೊನೆಯ 10 ಎಸೆತಗಳಲ್ಲಿ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿತು. ವೇಗದ ಬೌಲರ್ ಅರ್ಷದ್ ಖಾನ್ (2-24) ಕೊನೆಯ ಓವರ್ ನಲ್ಲಿ ಎರಡು ವಿಕೆಟ್ ಗಳನ್ನು ಉರುಳಿಸಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು.

ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಸಹಾನ್ ಅವರು ಅನ್ಶುಲ್ ಕಾಂಬೋಜ್ ಎಸೆದ ಚುರುಕಿನ ಯಾರ್ಕರ್ ಗೆ ವಿಕೆಟ್ ಒಪ್ಪಿಸಿದರು. ನಿರೋಶನ್ ಡಿಕ್ವೆಲ್ಲಾ (47; 45 ಎಸೆತ) ಹಾಗೂ ಅವಿಷ್ಕಾ ಫೆರ್ನಾಂಡೊ (45; 59 ಎಸೆತ) ಮೊದಲ ವಿಕೆಟ್ ಗೆ 93 ರನ್ಗಳ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಈ ಇಬ್ಬರು ಆಟಗಾರರು ಆಯುಷ್ ಬದೋನಿಗೆ ವಿಕೆಟ್ ಒಪ್ಪಿಸಿದರು.

ಇನಿಂಗ್ಸ್ ಅಂತ್ಯದಲ್ಲಿ ಲಂಕಾ ತಂಡ ಸುಲಭವಾಗಿ ವಿಕೆಟ್ ಕೈಚೆಲ್ಲಿದ ಪರಿಣಾಮ ತಿಲಕ್ ವರ್ಮಾ ನಾಯಕತ್ವದ ಭಾರತ 'ಎ' ತಂಡ ರೋಚಕ ಜಯ ಸಾಧಿಸಿತು.

ಅನ್ಶುಲ್ ಕಾಂಬೋಜ್ ಆರಂಭದಲ್ಲಿ ರನ್ ಸೋರಿಕೆ ಮಾಡಿದ್ದರೂ, ಸ್ಪಿನ್ ದ್ವಯರಾದ ಆಯುಷ್ ಬದೋನಿ (2-46) ಹಾಗೂ ಅನುಕೂಲ್ ರಾಯ್ (2-49) ತಲಾ ಎರಡು ವಿಕೆಟ್ಗಳನ್ನು ಪಡೆದರು.

ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ 'ಎ' ತಂಡ 50 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 277 ರನ್ ಗಳಿಸಿತು. ಮೊದಲ ಐದು ಓವರ್ಗಳಲ್ಲಿ 16 ರನ್ಗೆ ಎರಡು ವಿಕೆಟ್ ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದ ಭಾರತ ತಂಡಕ್ಕೆ ಹಿರಿಯ ಬ್ಯಾಟರ್ ಋತುರಾಜ್ ಗಾಯಕ್ವಾಡ್ 101 ರನ್ ಗಳಿಸಿ ಆಸರೆಯಾದರು.

ಉಪನಾಯಕ ಗಾಯಕ್ವಾಡ್ 112 ಎಸೆತಗಳಲ್ಲಿ ಲಿಸ್ಟ್ 'ಎ' ಕ್ರಿಕೆಟ್ನಲ್ಲಿ ತಮ್ಮ 21ನೇ ಶತಕ ಪೂರೈಸಿದರು. ನಾಯಕ ತಿಲಕ್ ವರ್ಮಾ (60; 97 ಎಸೆತ) ಹಾಗೂ ಗಾಯಕ್ವಾಡ್ ನಾಲ್ಕನೇ ವಿಕೆಟ್ಗೆ 150 ರನ್ ಸೇರಿಸಿ ತಂಡಕ್ಕೆ ಬಲ ತುಂಬಿದರು.

ಮೈದಾನದಲ್ಲಿ ಬಲವಾದ ಗಾಳಿ ಬೀಸುತ್ತಿದ್ದ ಕಾರಣ ಪಿಚ್ ಬೌಲರ್ ಗಳಿಗೆ ನೆರವಾಗುತ್ತಿತ್ತು. ಹೀಗಾಗಿ ಬ್ಯಾಟಿಂಗ್ ಕಷ್ಟಕರವೆನಿಸಿತು.

ಭಾರತ ತಂಡವು 69 ರನ್ಗೆ ಮೂರು ವಿಕೆಟ್ ಕಳೆದುಕೊಂಡಾಗ ಜೊತೆಯಾದ ಗಾಯಕ್ವಾಡ್ ಹಾಗೂ ತಿಲಕ್ ತಮ್ಮ ದೇಶೀಯ ಕ್ರಿಕೆಟ್ ಅನುಭವದ ನೆರವಿನಿಂದ ಇನಿಂಗ್ಸ್ಗೆ ಬಲ ತುಂಬಿದರು.

ಸ್ಪಿನ್ನರ್ ವಿಜಯಕಾಂತ್ ಅವರ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿದ ಗಾಯಕ್ವಾಡ್ 66 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಎಡಗೈ ಬ್ಯಾಟರ್ ತಿಲಕ್ ವರ್ಮಾ 86 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಎಡಗೈ ಸ್ಪಿನ್ನರ್ ವನುಜ್ ಸಹಾನ್ ಅವರ ಬೌಲಿಂಗ್ನಲ್ಲಿ ಒಂದು ರನ್ ಗಳಿಸಿದ ಗಾಯಕ್ವಾಡ್ ಶತಕ ಪೂರೈಸಿದರು. ಶತಕ ಗಳಿಸಿದ ಬಳಿಕ ಸಹಾನ್ ಅವರಿಗೆ ವಿಕೆಟ್ ಒಪ್ಪಿಸಿದರು.

ಆಯುಷ್ ಬದೋನಿ (24; 18 ಎಸೆತ) ಹಾಗೂ ಸೂರ್ಯಾನ್ಶ್ ಶೆಡ್ಗೆ (ಔಟಾಗದೆ 26; 14 ಎಸೆತ) ಕ್ಷಿಪ್ರವಾಗಿ 46 ರನ್ ಸೇರಿಸಿ ಭಾರತದ ಮೊತ್ತವನ್ನು 270ರ ಗಡಿ ದಾಟಿಸಿದರು.

►ಸಂಕ್ಷಿಪ್ತ ಸ್ಕೋರ್

ಭಾರತ 'ಎ': 50 ಓವರ್ಗಳಲ್ಲಿ 277/6

(ಋತುರಾಜ್ ಗಾಯಕ್ವಾಡ್ 101, ತಿಲಕ್ ವರ್ಮಾ 60, ಪ್ರಿಯಾಂಶ್ ಆರ್ಯ 32, ಮುಹಮ್ಮದ್ ಶಿರಾಝ್ 2-67)

ಶ್ರೀಲಂಕಾ 'ಎ': 48.5 ಓವರ್ಗಳಲ್ಲಿ 269ಕ್ಕೆ ಆಲೌಟ್

(ಸಹಾನ್ ಅರಾಚಿಗೆ 74, ನಿರೋಶನ್ ಡಿಕ್ವೆಲ್ಲಾ 47, ಸದೀರ ಸಮರವಿಕ್ರಮ 46, ಅವಿಷ್ಕಾ ಫೆರ್ನಾಂಡೊ 45, ಅರ್ಷದ್ ಖಾನ್ 2-24, ವಿಪ್ರಜ್ ನಿಗಮ್ 2-46, ಆಯುಷ್ ಬದೋನಿ 2-46, ಅನುಕೂಲ್ ರಾಯ್ 2-49)

ಪಂದ್ಯಶ್ರೇಷ್ಠ: ಋತುರಾಜ್ ಗಾಯಕ್ವಾಡ್.

Dailyhunt
Disclaimer: This content has not been generated, created or edited by Dailyhunt. Publisher: Varthabharathi