ಟೆಹ್ರಾನ್: ಇರಾನ್ ನ ರಾಜಧಾನಿ ಟೆಹ್ರಾನ್ ಮತ್ತು ಪಶ್ಚಿಮದ ಕರಾಜ್ ನಗರವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಸೇತುವೆಯ ಮೇಲೆ ಗುರುವಾರ ಮುಂಜಾನೆ ವಾಯುದಾಳಿ ನಡೆದಿದೆ. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ಇರಾನ್ ನ ʼಫಾರ್ಸ್ʼ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಘಟನೆಯ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. "ತುಂಬಾ ತಡವಾಗುವ ಮುನ್ನ ಒಪ್ಪಂದ ಮಾಡಿಕೊಳ್ಳಿ" ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ದಾಳಿಯ ನಂತರ ಸೇತುವೆ ಬೆಂಕಿಗಾಹುತಿಯಾಗಿ ದಟ್ಟ ಹೊಗೆಯಿಂದ ಆವರಿಸಿಕೊಂಡಿರುವ ದೃಶ್ಯಗಳಿರುವ ವೀಡಿಯೊವನ್ನು ಟ್ರಂಪ್ ಹಂಚಿಕೊಂಡಿದ್ದಾರೆ. ಅದರಲ್ಲಿ ಸೇತುವೆಗೆ ಸಂಭವಿಸಿದ ಹಾನಿ ಸ್ಪಷ್ಟವಾಗಿ ಕಾಣಿಸುತ್ತದೆ.
ಇರಾನ್ ತನ್ನ ನಿಲುವು ಬದಲಾಯಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ದಾಳಿಗೆ ಯಾರು ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟ್ರಂಪ್ ಹೇಳಿಕೆಗಳಿಂದ ಅಮೆರಿಕ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದರೂ, ಯಾವುದೇ ದೇಶವೂ ಅಧಿಕೃತವಾಗಿ ಹೊಣೆ ಹೊತ್ತಿಲ್ಲ.
ಇಸ್ರೇಲ್ ರಕ್ಷಣಾ ಪಡೆಗಳು ಈ ದಾಳಿಯ ಕುರಿತು ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿವೆ. ಇನ್ನೊಂದೆಡೆ, ಕೆಲವು ವರದಿಗಳ ಪ್ರಕಾರ ಸೇತುವೆ ಅಮೆರಿಕದ ದಾಳಿಯಲ್ಲಿ ಧ್ವಂಸಗೊಂಡಿದೆ ಎಂದು ಹೇಳಲಾಗಿದೆ.

