ಮಲಯಾಳಿಗಳ ಅಡುಗೆಯನ್ನು ನೆನಪಿಸಿಕೊಂಡಾಗ, ಉಬ್ಬಿದ, ಗುಳ್ಳೆಗಳಿರುವ, ಗರಿಗರಿಯಾದ ಪಪ್ಪಡಂ (ಹಪ್ಪಳ) ನೆನಪಾಗದೇ ಇರುವುದಿಲ್ಲ. ಸಾಂಪ್ರದಾಯಿಕ ಸದ್ಯ (ಊಟ) ಅಥವಾ ಬಿರಿಯಾನಿಯೇ ಆಗಿರಲಿ, ಕೇರಳದ ಊಟದ ಜೊತೆ ಇರಲೇಬೇಕಾದ ಅಚ್ಚುಮೆಚ್ಚಿನ ತಿನಿಸು ಇದು.
ಮಲಯಾಳಿಗಳ ಇಷ್ಟದ ತಿಂಡಿಯಾದ ಪುಟ್ಟು ಜತೆ ಪಪ್ಪಡಂ ಕೂಡಾ ಒಳ್ಳೆಯ ಕಾಂಬಿನೇಷನ್.
ಆದರೆ, ಆ ಸಾಂಪ್ರದಾಯಿಕ ಬಂಗಾರದ ಬಣ್ಣದ, ಗುಳ್ಳೆಗಳಿರುವ ಹಪ್ಪಳಕ್ಕೆ ಈಗ ಅನಿರೀಕ್ಷಿತ ಸವಾಲೊಂದು ಎದುರಾಗಿದೆ. ಹೊಸ ಆಹಾರ ಸುರಕ್ಷತಾ ನಿಯಮವೊಂದು ಅವುಗಳ ತಯಾರಿಕಾ ವಿಧಾನವನ್ನೇ ಬದಲಾಯಿಸಬಹುದು. ಇದು ಹಪ್ಪಳದ ವಿಶಿಷ್ಟ ಗುಣಮಟ್ಟವನ್ನೇ ಬದಲಾಯಿಸುತ್ತದೆ ಎಂದು ತಯಾರಕರು ಆತಂಕ ವ್ಯಕ್ತಪಡಿಸಿದ್ದಾರೆ.
►ಹಪ್ಪಳ ಕುರಿತ FSSAIಯ ಹೊಸ ನಿಯಮವೇನು?
ಹಪ್ಪಳಗಳಲ್ಲಿ ತೇವಾಂಶದ ಪ್ರಮಾಣವು ಶೇಕಡಾ 15ಕ್ಕಿಂತ ಹೆಚ್ಚಿರಬಾರದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣಿತ ಪ್ರಾಧಿಕಾರ (FSSAI) ಕಡ್ಡಾಯಗೊಳಿಸಿದೆ. ಆದರೆ, ಇದು ಹಪ್ಪಳ ತಯಾರಕರಲ್ಲಿ ಆತಂಕ ಮೂಡಿಸಿದೆ. ಹಪ್ಪಳದ ವಿಶಿಷ್ಟ ಸ್ವರೂಪ ಮತ್ತು ರುಚಿಗೆ ಪ್ರಮುಖ ಕಾರಣ ಅದರಲ್ಲಿರುವ ತೇವಾಂಶವೇ ಎಂದು ತಯಾರಕರು ಹೇಳುತ್ತಾರೆ. ಹೀಗಾಗಿ, ತೇವಾಂಶದ ಪ್ರಮಾಣ ಬದಲಾದರೆ, ಸಾಂಪ್ರದಾಯಿಕ ಹಪ್ಪಳದ ರುಚಿ ಮತ್ತು ರೂಪವೇ ಬದಲಾಗಬಹುದು.
FSSAIನ ಈ ಹೊಸ ನಿಯಮದಿಂದಾಗಿ ಹಪ್ಪಳಗಳು ಸರಿಯಾಗಿ ಉಬ್ಬುವುದಿಲ್ಲ. ಅಂತಿಮವಾಗಿ, ಗ್ರಾಹಕರು ಇಷ್ಟಪಡುವ ಕೇರಳ ಹಪ್ಪಳದ ವಿನ್ಯಾಸ ಮತ್ತು ಸ್ವರೂಪವೇ ಬದಲಾಗಲಿದೆ ಎಂದು ಕೇರಳ ಹಪ್ಪಳ ತಯಾರಕರ ಸಂಘ ತಿಳಿಸಿದೆ.
►ಹಪ್ಪಳಕ್ಕೂ ತೇವಾಂಶಕ್ಕೂ ಏನು ಸಂಬಂಧ?
ಎಲ್ಲಾ ರೀತಿಯ ಹಪ್ಪಳಗಳಲ್ಲಿ ತೇವಾಂಶದ ಪ್ರಮಾಣವು ಶೇಕಡಾ 15 ಇರಬೇಕು ಎಂದು FSSAI ಸೂಚಿಸಿದೆ.
ಪ್ರಸ್ತುತ, ಉತ್ತರ ಭಾರತದ ಮಸಾಲಾ ಹಪ್ಪಳ ಅಥವಾ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ತಯಾರಾಗುವ ಹಪ್ಪಳಗಳಿಗೆ ಹೋಲಿಸಿದರೆ, ಕೇರಳದ ಹಪ್ಪಳದಲ್ಲಿ ತೇವಾಂಶವು ಹೆಚ್ಚಿರುತ್ತದೆ (ಶೇಕಡಾ 10ರಿಂದ 12). ಮಸಾಲಾ ಹಪ್ಪಳ ಮತ್ತು ಇತರೆ ಹಪ್ಪಳಗಳಲ್ಲಿ ತೇವಾಂಶ ಕಡಿಮೆ ಇರುವುದರಿಂದ ಅವು ಹೆಚ್ಚು ದಿನಗಳವರೆಗೆ ಹಾಳಾಗದೆ ಉಳಿಯುತ್ತವೆ.
ಆದರೆ, ಕೇರಳದ ಹಪ್ಪಳದಲ್ಲಿ ಸರಾಸರಿ ಶೇಕಡಾ 15ರಿಂದ 16ರಷ್ಟು ತೇವಾಂಶವಿರುತ್ತದೆ. ಈ ಹೆಚ್ಚಿನ ತೇವಾಂಶವೇ ಅದು ಚೆನ್ನಾಗಿ ಉಬ್ಬಲು ಕಾರಣವಾಗಿದೆ.
ಎಣ್ಣೆಗೆ ಹಪ್ಪಳವನ್ನು ಹಾಕಿದಾಗ ಅದು ಮೊದಲು ಮುಳುಗುತ್ತದೆ. ತಕ್ಷಣವೇ ಸಾಕಷ್ಟು ಗುಳ್ಳೆಗಳು ಏಳುತ್ತವೆ. ಇದು ಹಪ್ಪಳದಲ್ಲಿರುವ ತೇವಾಂಶ ಆವಿಯಾಗುವ ಪ್ರಕ್ರಿಯೆಯಾಗಿದೆ. ಹಪ್ಪಳ ತುಂಬಾ ತೆಳುವಾಗಿರುವುದರಿಂದ, ಅದರಲ್ಲಿರುವ ಉಳಿದ ತೇವಾಂಶವು ಕ್ಷಣಮಾತ್ರದಲ್ಲಿ ಆವಿಯಾಗುತ್ತದೆ. ಇದರಿಂದಾಗಿಯೇ ಹಪ್ಪಳದ ಮೇಲ್ಮೈ ಗುಳ್ಳೆಗುಳ್ಳೆಯಾಗಿ, ಅಸಮವಾಗಿ ರೂಪುಗೊಳ್ಳುತ್ತದೆ. ಇದರ ಬೆನ್ನಲ್ಲೇ ಹಪ್ಪಳವು ಮೇಲಕ್ಕೆ ಬಂದು ಬಂಗಾರದ ಬಣ್ಣಕ್ಕೆ ತಿರುಗಲು ಶುರುವಾಗುತ್ತದೆ.
ಈ ಹೆಚ್ಚಿನ ತೇವಾಂಶವೇ ಹಪ್ಪಳವು ಹಗುರವಾಗಿರಲು ಮತ್ತು ಅದರ ವಿಶಿಷ್ಟ ಆಕಾರಕ್ಕೆ ಪ್ರಮುಖ ಕಾರಣ ಎಂದು ಕೇರಳದ ಈ ಸಾಂಪ್ರದಾಯಿಕ ಆಹಾರದ ತಯಾರಕರು ತಿಳಿಸಿದ್ದಾರೆ.
►ಹೊಸ FSSAI ನಿಯಮಗಳಿಗೆ ಪ್ರತಿಕ್ರಿಯೆ ಹೇಗಿದೆ?
ಹಪ್ಪಳ ಪ್ರಿಯರಿಗೆ ಈ ಸುದ್ದಿ ನಿರಾಶೆ ಮೂಡಿಸಿದೆ.
ಮನೋರಮಾ ವೆಬ್ಸೈಟ್ ವರದಿಯ ಪ್ರಕಾರ, ಕೇರಳ ಹಪ್ಪಳ ತಯಾರಕರ ಸಂಘವು ರಾಜ್ಯ ಆಹಾರ ಸಚಿವರನ್ನು ಭೇಟಿಯಾಗಿ ಸಹಾಯ ಕೋರಲಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಜಾರಿಗೆ ತರುವಾಗ ಕೇರಳ ಹಪ್ಪಳದ ವಿಶೇಷ ಗುಣಲಕ್ಷಣಗಳನ್ನು ಅಧಿಕಾರಿಗಳು ಪರಿಗಣಿಸಬೇಕು ಎಂದು ಸಂಘದ ರಾಜ್ಯ ಅಧ್ಯಕ್ಷ ವಿನೀತ್ ಪ್ರಾರತ್ ಒತ್ತಾಯಿಸಿದ್ದಾರೆ. ಪ್ರಾದೇಶಿಕ ಉತ್ಪನ್ನಗಳ ವಿಶೇಷತೆಯನ್ನು ಪರಿಗಣಿಸದೆ ಎಲ್ಲದಕ್ಕೂ ಒಂದೇ ರೀತಿಯ ಮಾನದಂಡವನ್ನು ಅನ್ವಯಿಸಲು ಸಾಧ್ಯವಿಲ್ಲ ಎಂಬುದು ಇವರ ವಾದವಾಗಿದೆ.
ಮತ್ತೊಂದೆಡೆ, ಹಪ್ಪಳ ಪ್ರಿಯರು ಕೂಡ ಈ ಹೊಸ ನಿಯಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. 'ಅವರು ಈಗ ನಮ್ಮ ಹಪ್ಪಳದ ಹಿಂದೆ ಬಿದ್ದಿದ್ದಾರೆ' ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದಿದ್ದಾರೆ.
ಮತ್ತೊಬ್ಬರು, 'ಅಯ್ಯೋ, ಈಗ ಹಪ್ಪಳಕ್ಕೂ ಕುತ್ತು ಬಂದಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ: 'ಮೊದಲು FSSAI ಮದ್ಯವನ್ನು ನಿಷೇಧಿಸಿತು. ನಂತರ ಮಹಿಳೆಯರನ್ನು ನಿಧಿಯಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿ ಎಂದು ಕಾಂತಪುರಂ ಹೇಳಿದರು. ಬಳಿಕ KSEB ಕರೆಂಟ್ ಕಟ್ ಮಾಡಿತು. ಈಗ ಶೇಕಡಾ 15ರಷ್ಟು ತೇವಾಂಶವು ಹೆಚ್ಚು ಎಂದು ಹೇಳಿ ಕೇರಳ ಹಪ್ಪಳವು ಉಬ್ಬದಂತೆ ಮಾಡಲು ಹೊರಟಿದ್ದಾರೆ. ದಯವಿಟ್ಟು ನನ್ನ ಹಪ್ಪಳವನ್ನು ಮುಟ್ಟಬೇಡಿ.'
ಇನ್ನೊಬ್ಬರು '@fssaiindia, ದಯವಿಟ್ಟು ಹೀಗೆ ಮಾಡಬೇಡಿ. ನಮ್ಮ ಸಾಂಪ್ರದಾಯಿಕ ಬಾಳೆಎಲೆಯ ಊಟಕ್ಕೆ ಲಿಜ್ಜತ್ ಮಾದರಿಯ ಹಪ್ಪಳವನ್ನು ತರಬೇಡಿ' ಎಂದು ಬರೆದಿದ್ದಾರೆ.
►ಕೇರಳದಲ್ಲಿ ಹಪ್ಪಳ ಎಷ್ಟು ಜನಪ್ರಿಯ?
ಮಲಯಾಳಿ ಅಡುಗೆಯಲ್ಲಿ ಹಪ್ಪಳವು ಅತ್ಯಂತ ಪ್ರಮುಖವಾದ ತಿನಿಸಾಗಿದ್ದು, ಪ್ರತಿಯೊಂದು ಊಟದ ಜೊತೆಗೂ ಇದು ಇದ್ದೇ ಇರುತ್ತದೆ. 2023ರ ವರದಿಯೊಂದರ ಪ್ರಕಾರ, ಕೇರಳದಲ್ಲಿ ಪ್ರತಿದಿನ ಸುಮಾರು 70 ಲಕ್ಷ ಹಪ್ಪಳಗಳು ಮಾರಾಟವಾಗುತ್ತವೆ ಮತ್ತು ಇದರ ಸರಾಸರಿ ದೈನಂದಿನ ವಹಿವಾಟು ಸುಮಾರು 50.75 ಲಕ್ಷ ರೂಪಾಯಿಗಳಷ್ಟಿದೆ.
ಹಪ್ಪಳಕ್ಕೆ ಮಲಯಾಳಂನಲ್ಲಿ ಪಪ್ಪಡಂ ಅಂತಾರೆ. ಈ ಪದವು ಸಂಸ್ಕೃತದ 'ಪರ್ಪಟ' (parpata) ಎನ್ನುವ ಪದದಿಂದ ಬಂದಿದೆ. ಚಪ್ಪಟೆಯಾದ ವೃತ್ತಾಕಾರದ ಆಕಾರವನ್ನು ಹೊಂದಿರುವ ಗರಿಗರಿಯಾದ, ತೆಳುವಾದ ಹಪ್ಪಳವು ತಲೆಮಾರುಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ.
ಬ್ರಿಟಿಷರು ಮಲಯಾಳಂನ 'ಪಪ್ಪಡಂ' ಪದವನ್ನು ತಮ್ಮ ಭಾಷೆಗೆ ಪಡೆದುಕೊಂಡರು. ಹೀಗಾಗಿಯೇ ದಕ್ಷಿಣ ಭಾರತದ ಅಡುಗೆಯ ಪರಿಚಯದೊಂದಿಗೆ 1860ರ ದಶಕದಲ್ಲಿ 'ಪಪ್ಪಡಂ' ಪದವು ಬ್ರಿಟಿಷ್ ಇಂಗ್ಲಿಷ್ ಭಾಷೆಯನ್ನು ಪ್ರವೇಶಿಸಿತು.
ಸೌಜನ್ಯ: firstpost.com

