Dailyhunt Logo
  • Light mode
    Follow system
    Dark mode
    • Play Story
    • App Story
Udupi | ದಲಿತ ಮಹಿಳೆಗೆ ಜಾತಿ ನಿಂದನೆ, ದೌರ್ಜನ್ಯ ಪ್ರಕರಣ : ನಾಲ್ವರು ಆರೋಪಿಗಳಿಗೆ ಶಿಕ್ಷೆ

Udupi | ದಲಿತ ಮಹಿಳೆಗೆ ಜಾತಿ ನಿಂದನೆ, ದೌರ್ಜನ್ಯ ಪ್ರಕರಣ : ನಾಲ್ವರು ಆರೋಪಿಗಳಿಗೆ ಶಿಕ್ಷೆ

ಡುಪಿ : ಏಳು ವರ್ಷಗಳ ಹಿಂದೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಲೆವೂರು ಗ್ರಾಮದ ಪ್ರಗತಿ ನಗರದ ಪರಿಶಿಷ್ಟ ಜಾತಿಗೆ ಸೇರಿದ ಜಯಪ್ರಕಾಶ್ ಎಂಬವರ ಪತ್ನಿ ಪಂಜಿಮಾ ಅವರಿಗೆ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ ಪ್ರಕರಣದ ಎಲ್ಲ ನಾಲ್ಕು ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆ.27ರಂದು ಆದೇಶ ನೀಡಿದೆ.

ಅಲೆವೂರು ಗ್ರಾಮದ ಪ್ರಗತಿ ನಗರದ ನಿವಾಸಿ ಶೋಭಾ ಹಾಗೂ ಆಕೆಯ ಮಗಳು ಚೈತ್ರಾ ಮತ್ತು ಶೋಭಾ ಸ್ನೇಹಿತ ಭಾಸ್ಕರ ಶೆಟ್ಟಿ ಮತ್ತು ಚೈತ್ರಾ ಸ್ನೇಹಿತ ಭರತ್ ಗಾಣಿಗ ಶಿಕ್ಷೆಗೆ ಗುರಿಯಾದ ಆರೋಪಿಗಳು.

ಪಂಜಿಮಾ ಅವರಿಗೆ ನೆರೆಮನೆಯ ಶೋಭಾ ಮತ್ತು ಚೈತ್ರಾ ಜಾತಿ ನಿಂದನೆ ಮಾಡಿ ಬೈಯುವುದು ಹಾಗೂ ತ್ಯಾಜ್ಯ ವಸ್ತುಗಳನ್ನು ಮನೆಯ ಮುಂದೆ ಹಾಕುವುದು ಹಾಗೂ ಕೋಳಿ ಮಾಂಸದ ಮೂಳೆಗಳನ್ನು ಮತ್ತು ಅಮಲು ಪದಾರ್ಥದ ಬಾಟಲಿಗಳನ್ನು ಎಸೆಯುತ್ತಿದ್ದರು. ಅದನ್ನು ಆಕ್ಷೇಪಿಸಿದಕ್ಕೆ ತಾಯಿ ಮಗಳು ಪಂಜಿಮಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡುತ್ತಿದ್ದರು.

2019ರ ಡಿ.2ರಂದು ಮತ್ತು ಡಿ.3ರಂದು ತಾಯಿ ಮಗಳು ಪಂಜಿಮಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದು, ಇದನ್ನು ಆಕ್ಷೇಪಿಸಿದಾಗ ಭಾಸ್ಕರ ಶೆಟ್ಟಿ ಮತ್ತು ಭರತ್ ಗಾಣಿಗ, ಪಂಜಿಮಾ ಹಾಗೂ ಆಕೆಯ ಗಂಡನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಲಾಗಿತ್ತು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಆಗಿನ ಡಿವೈಎಸ್ಪಿ ಟಿ.ಆರ್.ಜಯಶಂಕರ್ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್ ಎಲ್ಲ ಆರೋಪಿಗಳು ತಪ್ಪಿತಸ್ಥರು ಎಂದು ತಿರ್ಮಾನಿಸಿ ಶಿಕ್ಷೆ ವಿಧಿಸಿ ಆದೇಶ ನೀಡಿದರು.

ಪ್ರಕರಣದ ಎಲ್ಲ ಆರೋಪಿಗಳಿಗೆ ಕಲಂ 504 ಜೊತೆಗೆ 3(1)(ಆರ್) ಎಸ್ಸಿಎಸ್ಟಿ ಕಾಯ್ದೆಯಡಿ 6 ತಿಂಗಳು ಸಾದಾ ಶಿಕ್ಷೆ ಮತ್ತು 1,000 ರೂ. ದಂಡ, ತಪ್ಪಿದ್ದಲ್ಲಿ 15 ದಿನಗಳ ಹೆಚ್ಚುವರಿ ಸಾದಾ ಶಿಕ್ಷೆ, ಎಸ್.ಸಿ/ಎಸ್.ಟಿ ಕಾಯ್ದೆ ಕಲಂ 3(1)(ಬಿ) ಅಡಿ 6 ತಿಂಗಳು ಸಾದಾ ಶಿಕ್ಷೆ ಮತ್ತು 1,000 ರೂ. ದಂಡ, ತಪ್ಪಿದ್ದಲ್ಲಿ 15 ದಿನಗಳ ಸಾದಾ ಶಿಕ್ಷೆ, ಎಸ್.ಸಿ/ಎಸ್.ಟಿ ಕಾಯ್ದೆ ಕಲಂ 3(1)(ಎಸ್) ಅಡಿ 6 ತಿಂಗಳು ಸಾದಾ ಶಿಕ್ಷೆ ಮತ್ತು 1,000 ರೂ. ದಂಡ, ತಪ್ಪಿದ್ದಲ್ಲಿ 15 ದಿನಗಳ ಸಾದಾ ಶಿಕ್ಷೆ, ಎಸ್ಸಿಎಸ್ಟಿ ಕಾಯ್ದೆ ಕಲಂ 3(1)(ಝೆಡ್) ಅಡಿ 6 ತಿಂಗಳು ಸಾದಾ ಶಿಕ್ಷೆ ಮತ್ತು 1,000 ರೂ. ದಂಡ, ತಪ್ಪಿದ್ದಲ್ಲಿ 15 ದಿನಗಳ ಸಾದಾ ಶಿಕ್ಷೆ, ಆರೋಪಿ ಭಾಸ್ಕರ ಶೆಟ್ಟಿ ಮತ್ತು ಭರತ್ ಗಾಣಿಗಗೆ ಕಲಂ 506 ಜೊತೆಗೆ 3(1)(ಆರ್) ಮತ್ತು 3(2)(ವಿ-ಎ) ಎಸ್ಸಿಎಸ್ಟಿ ಕಾಯ್ದೆಯಡಿ 9 ತಿಂಗಳು ಸಾದಾ ಶಿಕ್ಷೆ ಮತ್ತು 2,000 ರೂ. ದಂಡ, ತಪ್ಪಿದ್ದಲ್ಲಿ 30 ದಿನಗಳ ಸಾದಾ ಶಿಕ್ಷೆ ವಿಧಿಸಿ ಆದೇಶ ನೀಡಲಾಗಿದೆ.

ಆರೋಪಿಗಳಿಂದ ವಸೂಲಾದ ದಂಡದ ಹಣದ ಪೈಕಿ 15,000 ರೂ. ವನ್ನು ಪಂಜಿಮಾ ಅವರಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi