ಉಡುಪಿ, ಸೆ.8: ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರು ಮಂಗಳವಾರ ಮಾತೆ ಮೇರಿಯ ಹುಟ್ಟುಹಬ್ಬ ಮತ್ತು ತೆನೆ ಹಬ್ಬವನ್ನು ಸಾಂಪ್ರದಾಯಿಕ ಸಡಗರ ಸಂಭ್ರಮದಿಂದ ಆಚರಿಸಿದರು.
ಚರ್ಚ್‌ಗಳಲ್ಲಿ ಹೊಸ ತೆನೆಗಳಿಗೆ ಪೂಜೆ, ವಿಶೇಷ ಪ್ರಾರ್ಥನೆ, ಮಾತೆ ಮೇರಿಯಮ್ಮ ಅವರ ಬಾಲ ರೂಪಕ್ಕೆ ಮಕ್ಕಳಿಂದ ಪುಷ್ಪಾರ್ಚನೆ ನಡೆದರೆ, ಮನೆ ಮನೆಗಳಲ್ಲಿ ಸಸ್ಯಾಹಾರಿ ಊಟ, ಹೊಸ ಅಕ್ಕಿಯ ಹಾಲು ಪಾಯಸದೂಟದೊಂದಿಗೆ ಸಂಭ್ರಮಿಸಿದರು.
ಕಳೆದ ಒಂಬತ್ತು ದಿನಗಳಿಂದ ಮಾತೆ ಮೇರಿಯ ಬಾಲ ರೂಪಿ ಪ್ರತಿಮೆಗೆ ಮಕ್ಕಳು ಸಲ್ಲಿಸುವ ಪುಷ್ಪಾರ್ಚನೆಯ ವೈಭವದ ಉತ್ತುಂಗ ರೂಪ ಮಂಗಳವಾರ ಕರಾವಳಿಯ ಪ್ರತಿ ಚರ್ಚ್‌ಗಳಲ್ಲಿ ಅನಾವರಣಗೊಂಡಿತು. ಗ್ರೊಟ್ಟೋದ ಮುಂಭಾಗದಲ್ಲಿ ಇರಿಸಿದ ಪ್ರತಿಮೆಗೆ ನೆರೆದ ನೂರಾರು ಮಕ್ಕಳು, ಹಿರಿಯರು ಬಣ್ಣ ಬಣ್ಣದ ಪುಷ್ಪಗಳು, ಎಸಳುಗಳನ್ನು ಪ್ರೋಕ್ಷಿಸಿ ಭಕ್ತಿ, ಖುಷಿ ಮೆರೆದರು. ಮಾತೆಯ ಮೇಲಿನ ಗೌರವ, ಭಕ್ತಿ, ಹೆಣ್ಮಕ್ಕಳ ರಕ್ಷಣೆಯ ಕಾಳಜಿಗಳು ಇಲ್ಲಿ ತೆರೆದುಕೊಂಡವು.
ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಧರ್ಮಗುರುಗಳು ತೆನೆ ಪೂಜೆ, ಬಲಿ ಪೂಜೆ ನೆರವೇರಿಸಿದರು. ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರ ಅನುಪಸ್ಥಿತಿಯಲ್ಲಿ, ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಹೊಸ ತೆನೆಯನ್ನು ಆಶೀರ್ವಚಿಸಿ ಹಬ್ಬದ ಪವಿತ್ರ ಬಲಿಪೂಜೆಯನ್ನು ನೆರವೇರಿಸಿ ಹಬ್ಬದ ಸಂದೇಶ ನೀಡಿದರು.
ಅವರು ತಮ್ಮ ಸಂದೇಶದಲ್ಲಿ ಮೊಂತಿ ಹಬ್ಬವು ಧಾರ್ಮಿಕ ಮಹತ್ವವನ್ನು ಹೊಂದಿರುವುದರ ಜೊತೆಗೆ, ಕೃತಜ್ಞತೆ, ಕುಟುಂಬ, ಹಂಚಿಕೆ ಮತ್ತು ಪರಸ್ಪರ ಕಾಳಜಿಯಂತಹ ಸಾರ್ವತ್ರಿಕ ಮೌಲ್ಯಗಳನ್ನು ಸಾರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯೂ ಆಗಿದೆ ಎಂದು ವಿವರಿಸಿದರು.
ಇದು ಪರಸ್ಪರ ಕಾಳಜಿ, ಕಳಕಳಿ ಮತ್ತು ಕ್ಷಮೆಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಸಂದರ್ಭವೂ ಆಗಿದೆ. ಕುಟುಂಬದ ಸದಸ್ಯರು ಪರಿಪೂರ್ಣರಾಗಿರುವುದರಿಂದ ಕುಟುಂಬ ಬಲಿಷ್ಠವಾಗುವುದಿಲ್ಲ; ಬದಲಾಗಿ, ಪರಸ್ಪರ ಅರ್ಥ ಮಾಡಿಕೊಳ್ಳಲು, ತಪ್ಪುಗಳನ್ನು ಕ್ಷಮಿಸಲು, ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಲು ಮತ್ತು ಸಂತೋಷದ ಕ್ಷಣಗಳನ್ನು ಪರಸ್ಪರ ಹಂಚಿಕೊಳ್ಳಲು ಸಿದ್ಧರಾಗಿರುವುದರಿಂದ ಕುಟುಂಬ ಬಲಿಷ್ಠವಾಗುತ್ತದೆ. ಕ್ಷಮೆ ಸಂಬಂಧಗಳನ್ನು ಗುಣಪಡಿಸುತ್ತದೆ; ಮೆಚ್ಚುಗೆ ಮತ್ತು ಪ್ರೋತ್ಸಾಹ ಅವುಗಳನ್ನು ಇನ್ನಷ್ಟು ಬಲಪಡಿಸುತ್ತವೆ ಎಂದರು.
ಮೊಂತಿ ಹಬ್ಬದ ಆಚರಣೆಯು ಭೂಮಿಯೊಂದಿಗಿನ ನಮ್ಮ ಸಂಬಂಧವನ್ನೂ ನೆನಪಿಸುತ್ತದೆ. ಹೊಸ ಬೆಳೆ, ಫಲ-ಪುಷ್ಪಗಳು ಪ್ರಕೃತಿಯ ಔದಾರ್ಯ ಮತ್ತು ಭೂಮಿಯನ್ನು ದುಡಿದು ಬೆಳೆಸುವ ರೈತರ ಪರಿಶ್ರಮದ ಸಂಕೇತವಾಗಿದೆ. ನಾವು ಪಡೆಯುವ ಆಹಾರಕ್ಕಾಗಿ ಕೃತಜ್ಞರಾಗಿರಲು, ರೈತರ ಪರಿಶ್ರಮವನ್ನು ಗೌರವಿಸಲು ಹಾಗೂ ಪರಿಸರವನ್ನು ಜವಾಬ್ದಾರಿಯಿಂದ ಕಾಪಾಡಲು ನಮಗೆ ಕರೆ ನೀಡುತ್ತದೆ ಎಂದು ಅ.ವಂ.ಡಾ.ಲೋಬೊ ತಿಳಿಸಿದರು.
ಪವಿತ್ರ ಕನ್ಯಾಮರಿಯಮ್ಮನ ಜನ್ಮದಿನವು ಈ ಹಬ್ಬಕ್ಕೆ ಧಾರ್ಮಿಕ ಅರ್ಥವನ್ನು ಕಲ್ಪಿಸುವುದರ ಜೊತೆಗೆ ಮೊಂತಿ ಹಬ್ಬವು ಸಾರುವ ಮೌಲ್ಯಗಳು ಧರ್ಮದ ಗಡಿಗಳನ್ನು ಮೀರಿ ಎಲ್ಲರನ್ನೂ ಸ್ಪರ್ಶಿಸುತ್ತವೆ. ಕೃತಜ್ಞತೆ, ಹಂಚಿಕೆ, ಹಿರಿಯರಿಗೆ ಗೌರವ, ಕುಟುಂಬ ಪ್ರೀತಿ, ಕ್ಷಮೆ, ಪರಸ್ಪರ ಕಾಳಜಿ ಮತ್ತು ಪ್ರಕೃತಿಯ ಬಗ್ಗೆ ಗೌರವ ಇವು ಯಾವುದೇ ಸಮಾಜವನ್ನು ಶ್ರೀಮಂತಗೊಳಿಸುವ ಸಾರ್ವತ್ರಿಕ ಮೌಲ್ಯಗಳಾಗಿವೆ ಎಂದರು
ಉಡುಪಿ ಶೋಕಮಾತಾ ದೇವಾಲಯದಲ್ಲಿ ಚರ್ಚಿನ ಧರ್ಮಗುರು ವಂ. ಡೆನಿಸ್ ಡೆಸಾ ನೇತೃತ್ವದಲ್ಲಿ ಹಬ್ಬದ ವಿಶೇಷ ಬಲಿಪೂಜೆ ನೆರವೇರಿತು. ವಂ. ಪ್ರವೀಣ್ ಲಿಯೋ ಹಾಗೂ ವಂ.ವಿಜಯ್ ಡಿಸೋಜಾ ಉಪಸ್ಥಿತರಿದ್ದರು.
ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಧರ್ಮಪ್ರಾಂತದ ಶ್ರೇಷ್ಠಗುರು ಹಾಗೂ ಚರ್ಚಿನ ರೆಕ್ಟರ್ ಮೊನ್ಞಿಂಜ್ಞೋರ್ ಫ್ರಾನ್ಸಿಸ್ ಲೂವಿಸ್ ಹೊಸ ತೆನೆಯನ್ನು ಆಶೀರ್ವಚಿಸಿ ಪವಿತ್ರ ಬಲಿಪೂಜೆ ಅರ್ಪಿಸಿದರು.
ಮಾತೆ ಮೇರಿಯ ಜನ್ಮ ದಿನದಂದೇ ಕರಾವಳಿಯಲ್ಲಿ ವಿಶೇಷವಾಗಿ ಆಚರಿಸುವ ತೆನೆ ಹಬ್ಬ ಮನೆಮನೆಗಳಲ್ಲಿ ಸಂಭ್ರಮಕ್ಕೆ ಕಾರಣವಾಯಿತು. ಮುಂಜಾನೆಯೇ ಭತ್ತದ ತೆನೆ ಮತ್ತು ಕಬ್ಬನ್ನು ಗುರಿಕಾರರು ಚರ್ಚ್‌ಗೆ ಮೆರವಣಿಗೆ ಯಲ್ಲಿ ಕೊಂಡೊಯ್ದರು. ಅಲ್ಲಿ ಧರ್ಮಗುರುಗಳು ತೆನೆ ಪೂಜೆ ನಡೆಸಿದ ಬಳಿಕ ಭಕ್ತರಿಗೆ ಹಂಚಲಾಯಿತು.
ಭತ್ತದ ತೆನೆಯನ್ನು ಭಕ್ತಿಪೂರ್ವಕವಾಗಿ ಮನೆಗೆ ಕೊಂಡೊಯ್ದ ಭಕ್ತರು ದೇವರ ಪೀಠದ ಮೇಲಿರಿಸಿ ಪ್ರಾರ್ಥನೆ ಸಲ್ಲಿಸಿ ದರು. ಭತ್ತದ ಕಾಳಿನ ಅಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಹಾಲು, ತೆಂಗಿನ ಹಾಲು, ಪಾಯಸದ ಮೂಲಕ ಹೊಸ ಅಕ್ಕಿಯ ಊಟ ಸವಿದರು. ಸಂಪೂರ್ಣ ಶಾಖಾಹಾರಿ ಆಹಾರ ಇಂದಿನ ವಿಶೇಷವಾಗಿತ್ತು.
ಇದಲ್ಲದೆ ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ವಂ.ಆಲ್ಬನ್ ಡಿಸೋಜಾ, ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ವಂ.ಪಾವ್ಲ್ ರೇಗೊ, ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ವಂ. ಚಾರ್ಲ್ಸ್ ಮಿನೇಜಸ್ ಸೇರಿದಂತೆ ಇನ್ನಿತರ ಚರ್ಚುಗಳಲ್ಲಿ ಕೂಡ ತೆನೆಹಬ್ಬ ಮತ್ತು ಮಾತೆ ಮೇರಿಯ ಜನ್ಮ ದಿನವನ್ನು ವಿಜಂಭಣೆಯಿಂದ ಆಚರಿಸಲಾಯಿತು.





