Dailyhunt Logo
  • Light mode
    Follow system
    Dark mode
    • Play Story
    • App Story
ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಶಾಲಾ ಆರಂಭೋತ್ಸವ

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಶಾಲಾ ಆರಂಭೋತ್ಸವ

ಉಡುಪಿ, ಜೂ.1: ಉಡುಪಿ ಜಿಲ್ಲೆಯಾದ್ಯಂತ ಶಾಲಾ ಶೈಕ್ಷಣಿಕ ವರ್ಷದ ಆರಂಭೋತ್ಸವವನ್ನು ಸೋಮವಾರ ಸಂಭ್ರಮದಿಂದ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲೆಯಲ್ಲಿ 1050 ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿದ್ದು, ಇಲ್ಲಿನ ಬಹುತೇಕ ಶಾಲೆಗಳಲ್ಲಿ ತಳಿರು ತೋರಣ, ಬಲೂನ್‌ಗಳಿಂದ ಸಿಂಗರಿಸಿ, ಮೊದಲ ದಿನ ಆಗಮಿಸಿದ ಮಕ್ಕಳನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳ ಲಾಯಿತು.

ಕೆಲ ಶಾಲೆಗಳಲ್ಲಿ ಚಿಣ್ಣರಿಗೆ ಆರತಿ ಬೆಳಗಿ, ಪುಷ್ಪ ವೃಷ್ಟಿಯೊಂದಿಗೆ, ಗುಲಾಬಿ ಹೂವುಗಳನ್ನು ನೀಡಿ, ಅಕ್ಕರೆಯ ಸ್ವಾಗತ ಕೋರಲಾಯಿತು. ಕಳೆದ ಒಂದೂವರೆ ತಿಂಗಳಿನಿಂದ ವಿದ್ಯಾ ಮಂದಿರಗಳಲ್ಲಿ ನಿಶ್ಯಬ್ಧವಾಗಿದ್ದ ಘಂಟೆಗಳ ಸದ್ದು ಶಾಲಾರಂಭದೊಂದಿಗೆ ಮತ್ತೆ ಮೊಳಗಿತು. ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಶುರುವಾಗಿದೆ.

ಜಿಲ್ಲೆಯ ಕುಂದಾಪುರ, ಬೈಂದೂರು, ಬ್ರಹ್ಮಾವರ, ಉಡುಪಿ ಹಾಗೂ ಕಾರ್ಕಳ ವಲಯಗಳ ಒಂದೊಂದು ಶಾಲೆಗಳಲ್ಲಿ ಆರಂಭೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಶಾಸಕರು ಸಹಿತ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ, ನೋಟು ಪುಸ್ತಕ ಹಾಗೂ ಸಮವಸ್ತ್ರಗಳನ್ನು ಮತ್ತು ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ಮಧ್ಯಾಹ್ನ ಸಿಹಿ ಊಟ ಬಡಿಸಲಾಯಿತು.

ಶೌಚಾಲಯ ಉದ್ಘಾಟನೆ: ಬ್ರಹ್ಮಾವರ ತಾಲೂಕಿನ ಬಾಳಕುದ್ರು ಸರಕಾರಿ ಶಾಲೆಗೆ ಎಂಆರ್‌ಪಿಎಲ್‌ನಿಂದ ನಿರ್ಮಿಸಿ ಕೊಟ್ಟ ಹೆಣ್ಣು ಮಕ್ಕಳ ಶೌಚಾಲಯವನ್ನು ಇಂದು ಹಸ್ತಾಂತರಿಸಲಾಯಿತು. ಇದರಲ್ಲಿ ಉಡುಪಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಲೋಕೇಶ್ ಭಾಗವಹಿಸಿದ್ದರು.

ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಪುಷ್ಪಾನಂದ ಫೌಂಡೇಶನ್ ವತಿಯಿಂದ ಉಡುಪಿ ವಿಧಾನಸಭಾ ಕ್ಷೇತ್ರದ ಸರಕಾರಿ ಹಾಗೂ ಅನುದಾನಿತ ಶಾಲೆಗಳ 20 ಸಾವಿರ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಣೆ ಕಾರ್ಯಕ್ರಮಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಚಾಲನೆ ನೀಡಿದರು.

ಹೆಬ್ರಿ ತಾಲೂಕಿನ ಮುದ್ರಾಡಿಯ ನೆಲ್ಲಿಕಟ್ಟೆಯ ಸರಕಾರಿ ಶಾಲೆಗೆ ಲಯನ್ಸ್ ಕ್ಲಬ್ ವತಿಯಿಂದ ಟಿವಿಯನ್ನು ಕೊಡುಗೆ ಯಾಗಿ ನೀಡಲಾಯಿತು. ಕಾಪು ತಾಲೂಕಿನ ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲಾ ಪ್ರಾರಂಭೋತ್ಸವ ದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪಾಲ್ಗೊಂಡರು. ಮೊದಲ ದಿನ ಶಾಲೆಗೆ ಆಗಮಿಸಿದ ಮಕ್ಕಳನ್ನು ಅವರು ಸ್ವಾಗತಿಸಿದರು.

ಕುಂದಾಪುರ ತಾಲೂಕಿನ ಹಕ್ಲಾಡಿಯ ಶ್ರೀಕೆಎಸ್‌ಎಸ್ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಹೊಸ ಶೈಕ್ಷಣಿಕ ವರ್ಷದ ಅದ್ಧೂರಿ ಪ್ರಾರಂಭೋತ್ಸವದಲ್ಲಿ 8 ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಾಲಾಗಿ ನಿಂತು, ಹೂವುಗಳನ್ನು ನೀಡಿ, ಸ್ವಾಗತಿಸಿದರು. ಇದೇ ವೇಳೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯನ್ನು ಪ್ರಾರಂಭೋತ್ಸವದ ಪ್ರಯುಕ್ತ ತಳಿರು ತೋರಣಗಳಿಂದ ಅಲಂಕರಿಸಿದ್ದು ವಿದ್ಯಾರ್ಥಿಗಳನ್ನು ವಾದ್ಯ ವೃಂದದೊಂದಿಗೆ ಬರ ಮಾಡಿಕೊಂಡು ಶಾಲಾ ಸಭಾಂಗಣದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

ಕುಂದಾಪುರದಲ್ಲೂ ಸಂಭಮ: ಕುಂದಾಪುರ ವಲಯದ 119 ಪ್ರಾಥಮಿಕ ಶಾಲೆ, 15 ಅನುದಾನಿತ, 20 ಸರಕಾರಿ ಪ್ರೌಢಶಾಲೆಗಳು, 7 ಅನುದಾನ ಪ್ರೌಢಶಾಲೆಗಳು, 2 ಅನುದಾನ ರಹಿತ ಕಿ.ಪ್ರಾ. ಶಾಲೆ, 9 ಅನುದಾನ ರಹಿತ ಹಿ.ಪ್ರಾ. ಶಾಲೆಗಳು, 20 ಅನುದಾನ ರಹಿತ ಪ್ರೌಢಶಾಲೆಗಳು, 4 ವಸತಿ ಶಾಲೆಗಳ ಸಹಿತ ಎಲ್ಲ 195 ಶಾಲೆ, ಬೈಂದೂರು ವಲಯದ 179 ಸರಕಾರಿ ಪ್ರಾಥಮಿಕ, 15 ಸರಕಾರಿ ಪ್ರೌಢಶಾಲೆಗಳು, 36 ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಹಿತ ಎಲ್ಲ 230 ಶಾಲೆಗಳು ಆರಂಭಗೊಂಡಿವೆ.

ಕುಂದಾಪುರ ಹಾಗೂ ಬೈಂದೂರು ವಲಯದ ಬಹುತೇಕ ಎಲ್ಲ ಶಾಲೆಗಳಲ್ಲಿಯೂ ಪ್ರಾರಂಭೋತ್ಸವದೊಂದಿಗೆ, ಪೋಷಕರ ಮಹಾಸಭೆ, ದಾಖಲಾತಿ ಆಂದೋಲನ, ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ, ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದವರಿಗೆ ಸಮ್ಮಾನ, ಇನ್ನುಳಿದ ತರಗತಿಗಳಲ್ಲಿ ಗರಿಷ್ಠ ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ, ಇನ್ನು ದಾನಿಗಳಿಂದ ಬ್ಯಾಗ್, ಪುಸ್ತಕ, ಕೊಡೆ ವಿತರಣೆಯೂ ನೆರವೇರಿತು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು, ಎಸ್ ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ, ಊರವರು, ವಿದ್ಯಾಭಿಮಾನಿಗಳು, ಪೋಷಕರು ಪಾಲ್ಗೊಂಡಿದ್ದರು.

ಗಮನ ಸೆಳೆದ ದೊಡ್ಡಣಗುಡ್ಡೆ ಆರಂಭೋತ್ಸವ!

ಉಡುಪಿ ತಾಲೂಕಿನ ದೊಡ್ಡಣಗುಡ್ಡೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೊತ್ಸವ ಸಾಂಪ್ರದಾಯಿಕ ಶೈಲಿಯಲ್ಲಿ ವಿಭಿನ್ನವಾಗಿ ಗಮನಸೆಳೆಯಿತು.

ಪ್ರಾರಂಭೋತ್ಸವಕ್ಕೂ ಮೊದಲು ಜಾಥಾ ಮೂಲಕ ವಿದ್ಯಾರ್ಥಿಗಳನ್ನ ಶಾಲೆಗೆ ಕರೆತರಲಾಯಿತು. ಗಣ್ಯರ ಉಪಸ್ಥಿತಿ ಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರು ಆರತಿ ಎತ್ತಿ ಸ್ವಾಗತಿಸಿದರು. ಈ ವೇಳೆ ಅರಿಶಿನ ಕುಂಕುಮದ ನೀರಲ್ಲಿ ಮಕ್ಕಳ ಹಸ್ತವನ್ನು ಅದ್ದಿ ಗೋಡೆಯ ಮೇಲೆ ಹಾಕಲಾದ ಬಿಳಿ ಹಾಳೆಯ ಮೇಲೆ ಅಚ್ಚೊತ್ತಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಪಠ್ಯ ಪುಸ್ತಕ ವಿತರಣೆ ಮಾಡಲಾಯಿತು.

'ಜಿಲ್ಲೆಯ 1050 ಶಾಲೆಗಳ ಪೈಕಿ ಬಹುತೇಕ ಎಲ್ಲ ಶಾಲೆಗಳಲ್ಲಿ ಸಂಭ್ರಮದ ಆರಂಭೋತ್ಸವವನ್ನು ಆಚರಿಸಲಾಗಿದೆ. ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಪಠ್ಯಪುಸ್ತಕಗಳು, ಸಮವಸ್ತ್ರಗಳನ್ನು ವಿತರಿಸಲಾಗಿದ್ದು, ಕೆಲವು ಶಾಲೆಗಳಿಗೆ ಮಾತ್ರ ಕೊರತೆಯಾಗಿರುವುದು ಕಂಡುಬಂದಿದೆ. ಶೂ ಮತ್ತು ಸಾಕ್ಸ್ ವಿತರಣೆ ಮುಂದೆ ಮಾಡಲಾಗುವುದು'

-ಲೋಕೇಶ್, ಉಪ ನಿರ್ದೇಶಕರು,

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ



Dailyhunt
Disclaimer: This content has not been generated, created or edited by Dailyhunt. Publisher: Varthabharathi