ಉಡುಪಿ, ಎ.4: ಜಿಲ್ಲೆಯಲ್ಲಿ ಹೊಸ ಪ್ರವಾಸಿ ಸ್ಥಳಗಳನ್ನು ಅನ್ವೇಷಿಸಿ, ಅದನ್ನು ಪ್ರವಾಸಿಗರ ಎದುರು ತೆರೆದಿರಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕಿದೆ. ಜಿಲ್ಲೆಗೆ ಆಗಮಿಸುವ ಶೇ.90ರಷ್ಟು ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸೋ ದ್ಯಮದ ಕುರಿತಂತೆ ಹೆಚ್ಚಿನ ಮಾಹಿತಿ ಇರುವುದಿಲ್ಲ.
ಇದಕ್ಕಾಗಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರೊಂದಿಗೆ ಜಿಲ್ಲೆಯ ಪ್ರವಾಸಿ ತಾಣಗಳ ವಿವರ ಪ್ರವಾಸಿಗರಿಗೆ ಸುಲಭವಾಗಿ ದೊರಕುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.
ಶನಿವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕುರಿತಂತೆ ಜಿಲ್ಲೆಯ ಪ್ರವಾಸೋದ್ಯಮ ಪಾಲುದಾರರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಕೃತಿದತ್ತ ಸಹಜ ಸೌಂದರ್ಯವನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಕ್ರಿಯ ಪಾಲುದಾರರು ಪರಿಸರ ಸ್ನೇಹಿ ಪ್ರವಾಸೋದ್ಯ ಮದ ಸಮಗ್ರ ಅಭಿವೃದ್ಧಿಗೆ ಪೂರಕವಾದ ನೀಲನಕಾಶೆಯನ್ನು ಸಿದ್ಧಪಡಿಸಿ, ಶೀಘ್ರವಾಗಿ ಪ್ರಸ್ತುತಪಡಿಸುವಂತೆ ಜಿಲ್ಲಾಧಿಕಾರಿ ಕರೆ ನೀಡಿದರು.
ಜಿಲ್ಲೆಯಲ್ಲಿ ಕಡಲ ಕಿನಾರೆಗಳು, ರಮಣೀಯ ಪಶ್ಚಿಮ ಘಟ್ಟ ಶ್ರೇಣಿಗಳು, ಕಾನನಗಳು, ಝರಿಗಳು ಹಾಗೂ ಧಾರ್ಮಿಕ ಕ್ಷೇತ್ರಗಳು ಪ್ರಮುಖವಾಗಿದ್ದು, ಸಾವಿರಾರು ಪ್ರವಾಸಿಗರು ಬಂದು ಇಲ್ಲಿನ ಸೌಂದರ್ಯ ಕಣ್ತುಂಬಿ ಕೊಳ್ಳುತ್ತಿದ್ದಾರೆ. ಯಾವುದೇ ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವ ಮುನ್ನ ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್, ವಸತಿ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡುವ ರೀತಿ ಯಲ್ಲಿ ಯೋಜನೆ ರೂಪಿಸಿ ಪ್ರಸ್ತುತ ಪಡಿಸಲು ಮೊದಲ ಆದ್ಯತೆ ನೀಡಬೇಕು ಎಂದರು.
ಕಳೆದ ಸಭೆಯಲ್ಲಿ ಸೂಚಿಸಿದಂತೆ ರಚಿಸಲಾದ ಪಾಲುಗಾರ ತಂಡವು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗು ವಂತೆ ಆಸಕ್ತಿದಾಯಕ ವಿಷಯ ಗಳ ಬಗ್ಗೆ ವಿಸ್ಕೃತ ವರದಿಯೊಂದಿಗೆ ಎ.10ರೊಳಗೆ ಪ್ರಸ್ತುತಪಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪ್ರಸ್ತುತ ಇರುವ ಪ್ರವಾಸಿ ತಾಣಗಳ ಜೊತೆಗೆ ತೆರೆ- ಮರೆಯಲ್ಲಿರುವ ಪ್ರವಾಸಿ ತಾಣಗಳ ವಿವರಗಳು, ತಂಗಲು ಅನುಕೂಲ ವಾಗುವಂತೆ ಸ್ಥಳೀಯವಾಗಿ ಲಭ್ಯವಿರುವ ವಸತಿ ವ್ಯವಸ್ಥೆ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಗಳು ಪ್ರವಾಸಿಗರಿಗೆ ದೊರೆತಲ್ಲಿ ಇನ್ನೂ ಹೆಚ್ಚಿನ ಸಮಯವನ್ನು ಜಿಲ್ಲೆಯಲ್ಲಿ ಕಳೆಯಲು ಅವರು ಬಯಸಬಹುದು. ಪ್ರವಾಸೋದ್ಯಮದ ವಿಸ್ತರಣೆಗೆ ಜಿಲ್ಲೆಯ ಪಾಲುದಾರರು ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಜಿಲ್ಲೆಯ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳು, ಜಿಲ್ಲೆಗೆ ಇರುವ ವೈಶಿಷ್ಟ್ಯತೆ, ಧಾರ್ಮಿಕತೆ, ಆಹಾರ ಶೈಲಿ ಸೇರಿದಂತೆ ಇಲ್ಲಿನ ವಿವಿಧ ವಿಶೇಷತೆಗಳ ಬಗ್ಗೆ ಸರಿಯಾದ ಪ್ರಚಾರ ದೊರೆತಲ್ಲಿ ವರ್ಷದಿಂದ ವರ್ಷಕ್ಕೆ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಹಿರಿಮೆ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವ ರೀತಿಯಲ್ಲಿ ಕೊಡುಗೆ ನೀಡಬಹುದು ಎಂಬ ಬಗ್ಗೆ ಸಕ್ರಿಯ ಪಾಲುದಾರರು ನೂತನ ಆವಿಷ್ಕಾರಗಳ ದಾಖಲೆಗಳನ್ನು ಸಿದ್ಧಪಡಿಸಲು ಗಮನ ಹರಿಸುವಂತೆ ಕಿವಿಮಾತು ಹೇಳಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಂ, ಜಿಲ್ಲೆಯ ಪ್ರವಾಸೋದ್ಯಮ ಪಾಲುದಾರರು ಹಾಗೂ ಇತರರು ಉಪಸ್ಥಿತರಿದ್ದರು.


