ಉಡುಪಿ, ಸೆ.12: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ ಜಿಲ್ಲೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಸೈಂಟ್ ಸಿಸಿಲಿ ಸಂಯುಕ್ತ ಪದಪೂರ್ವ ಕಾಲೇಜಿನಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ ಹೆಚ್. ಮಾತನಾಡಿ, ಪ್ರತೀ ವರ್ಷ ಸೆಪ್ಟೆಂಬರ್ 10ನ್ನು ವಿಶ್ವದಾದ್ಯಂತ 'ವಿಶ್ವ ಆತ್ಮಹತ್ಯೆ ತಡೆ ದಿನ'ವನ್ನಾಗಿ ಆಚರಿಸಲಾಗುತ್ತದೆ. ಮಾನಸಿಕ ಸಮಸ್ಯೆಗಳು, ಖಿನ್ನತೆ ಅಥವಾ ಆತ್ಮಹತ್ಯೆಯ ಆಲೋಚನೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ತಪ್ಪಲ್ಲ ಎಂಬ ವಾತಾವರಣವನ್ನು ಸೃಷ್ಟಿಸುವುದು, ಆತ್ಮಹತ್ಯೆ ಅನಿವಾರ್ಯವಲ್ಲ, ಸಕಾಲಿಕ ವತ್ತು ಮಾನಸಿಕ ನೆರನಿಂದ ಜೀವಗಳನ್ನು ಉಳಿಸಬಹುದು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಸಹಾಯ ಮೇರಿ ಮಾತನಾಡಿ, ಯಾರಾದರೂ ಮಾನಸಿಕ ಒತ್ತಡ, ನಿರಾಸೆ, ಸಂಕಷ್ಟದಲ್ಲಿರುವಾಗ ಅವರನ್ನು ನಿರ್ಲಕ್ಷಿಸದೇ ಅವರ ಮಾತನ್ನು ಆಲಿಸುವುದು ಬಹಳ ಮುಖ್ಯ. ಆಲಿಸೋಣ, ಅರ್ಥ ಮಾಡಿಕೊಳ್ಳೋಣ, ಬೆಂಬಲಿಸೋಣ, ಜೀವ ರಕ್ಷಿಸೋಣ ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ.ಶಶಾಂಕ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿ, ಆತ್ಮಹತ್ಯೆಯ ಆಲೋಚನೆಗಳು ಒಬ್ಬ ವ್ಯಕ್ತಿಯಲ್ಲಿ ಏಕಾಏಕಿ ಹುಟ್ಟಿಕೊಳ್ಳುವುದಿಲ್ಲ. ಬಹುತೇಕ ಸಂದರ್ಭದಲ್ಲಿ ಆ ವ್ಯಕ್ತಿಯ ನಡವಳಿಕೆ ಮತ್ತು ದೈನಂದಿನ ಅಭ್ಯಾಸಗಳಲ್ಲಿ ಸೂಕ್ಷ್ಮ ಮುನ್ಸೂಚನೆ ಕಂಡು ಬಂದರೆ ಇವುಗಳನ್ನು ಸಕಾಲದಲ್ಲಿ ಗುರುತಿಸಿ ಸ್ಪಂದಿಸುವುದರಿಂದ ಅಮೂಲ್ಯ ಜೀವವನ್ನು ಉಳಿಸಬಹುದು ಎಂದರು.
ವ್ಯಕ್ತಿಯೊಬ್ಬನ ದೈಹಿಕ ಆರೋಗ್ಯದ ರಕ್ಷಣೆಯಷ್ಟೇ ಮಾನಸಿಕ ಆರೋಗ್ಯದ ರಕ್ಷಣೆ ಕೂಡ ಮುಖ್ಯ. ಕೇಂದ್ರ ಸರ್ಕಾರದ ಉಚಿತ ಮತ್ತು 24*7 ಲಭ್ಯವಿರುವ ಟೆಲಿಮನಸ್ ಸಹಾಯವಾಣಿ ಸಂಖ್ಯೆ 14416ಗೆ ಕರೆ ಮಾಡಿ ಮಾಹಿತಿಗಳನ್ನು ನೀಡುವಂತೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮೇಲ್ವೀಚಾರಣಾಧಿಕಾರಿ ಹೆಚ್.ನಾಯ್ಕೃರ್, ಶುಶ್ರೂಷಾಧಿಕಾರಿ ದೀಕ್ಷಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪ್ರವೀಣ ಹಾಗೂ ಇತರರು ಉಪಸ್ಥಿತರಿದ್ದರು.
ವಸಂತಿ ಸ್ವಾಗತಿಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕ್ಲಿನಿಕಲ್ ಸೈಕಾಲಾಜಿಸ್ಟ್ ಜೆನ್ನಿಫರ್ ಕ್ಯಾಥರಿನ್ ವಂದಿಸಿದರು.

