ಉಡುಪಿ, ಎ.2: ಕುತ್ಪಾಡಿಯಲ್ಲಿರುವ ಎಸ್‌ಡಿಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕ್ರೀಡಾ ವಿಭಾಗವು ಆಂತರಿಕ ಗುಣಮಟ್ಟ ಕ್ಷಮತೆ ಘಟಕದ ಸಹಯೋಗದಲ್ಲಿ ಕ್ರೀಡೆಯ ಕುರಿತಂತೆ ರಾಷ್ಟ್ರೀಯ ಮಟ್ಟದ ಮುಂದುವರೆದ ವೈದ್ಯಕೀಯ ಶಿಕ್ಷಣ ವಿಚಾರಗೋಷ್ಠಿಯೊಂದನ್ನು ಇತ್ತೀಚೆಗೆ ಆಯೋಜಿಸಿತ್ತು.
ಇದರಲ್ಲಿ ಭಾಗವಿಸಿದ ವಿದ್ಯಾರ್ಥಿಗಳು, ಅಧ್ಯಾಪಕರು, ಆರೋಗ್ಯ ವೃತ್ತಿಪರರು ಹಾಗೂ ಕ್ರೀಡಾ ಆಸಕ್ತರು, ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯ ದೃಷ್ಟಿಕೋನಗಳ ಸಮನ್ವಯದ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಸಂಭವಿಸುವ ರೋಗ ಮತ್ತು ಗಾಯಗಳಿಗೆ ಸಮಗ್ರ ಚಿಕಿತ್ಸೆ ವಿಧಾನಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ., ಉಪ ಪ್ರಾಂಶುಪಾಲ ಡಾ.ನಿರಂಜನ್ ರಾವ್ ಮತ್ತು ಡಾ. ನಾಗರಾಜ್ ಎಸ್., ವೈದ್ಯಕೀಯ ಅಧೀಕ್ಷಕ ಡಾ.ಜಯಕೃಷ್ಣ ನಾಯಕ್, ಸ್ನಾತಕೋತ್ತರ ವಿಭಾಗ ಮುಖ್ಯಸ್ಥ ಡಾ.ಶ್ರೀಕಾಂತ್ ಪಿ., ಸ್ನಾತಕ ವಿಭಾಗ ಮುಖ್ಯಸ್ಥ ಡಾ. ಪೃಥ್ವಿರಾಜ್ ಪುರಾಣಿಕ್, ಸ್ನಾತಕೋತ್ತರ ವಿಭಾಗದ ಸಹಾಯಕ ಡೀನ್ ಡಾ. ರಾಜಲಕ್ಷ್ಮಿ, ಹಾಗೂ ಕ್ರೀಡಾ ವಿಭಾಗದ ಸಹಾಯಕ ಡೀನ್ ಡಾ. ಸುಧೀಂದ್ರ ಮೊಹೆರರ್ ಮತ್ತು ಡಾ. ಮೊಹಮ್ಮದ್ ಫೈಸಲ್ ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲ ಡಾ. ನಿರಂಜನ್ ರಾವ್ ಅಧ್ಯಕ್ಷೀಯ ಭಾಷಣದಲ್ಲಿ ಕ್ರೀಡಾ ವೈದ್ಯಕೀಯ ಕ್ಷೇತ್ರದಲ್ಲಿ ಆಯುರ್ವೇದ ಪಂಚಕರ್ಮ ಹಾಗೂ ಭೌತಚಿಕಿತ್ಸೆಯ (ಫಿಸಿಯೊಥೆರಾಪಿಯ) ಮಹತ್ವವನ್ನು ಒತ್ತಿ ಹೇಳಿದರು. ಇದರ ಅಂಗವಾಗಿ ಕ್ರೀಡೆ ಮತ್ತು ದೈಹಿಕ ಕ್ಷಮತೆಯ ಅಗತ್ಯತೆಗಳು ಎಂಬ ವಿಷಯದ ಕುರಿತು ಮೂಡುಬಿದಿರೆ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ.ಮಧು ಜಿ.ಆರ್ ವಿಶೇಷ ಉಪನ್ಯಾಸ ನೀಡಿದರು.
ಸಂಸ್ಥೆಯ ಶಲ್ಯಾತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಆರ್. ನಾಯರ್ ತಜ್ಞ ಅವರು ಕ್ರೀಡೆಯಿಂದ ಉಂಟಾಗುವ ಗಾಯಗಳು ಹಾಗು ಅದರ ಆಯುರ್ವೇದೀಯ ಪರಿಹಾರೋಪಾಯಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಡಾ. ಮೊಹಮ್ಮದ್ ಫೈಸಲ್ ಸ್ವಾಗತಿಸಿ, ಡಾ. ಮೇಘನಾ ಕಾರ್ಯಕ್ರಮ ನಿರೂಪಿಸಿದರು. ಡಾ. ಸುಶ್ಮಿತಾ ವಂದಿಸಿದರು.

