Dailyhunt
ಉಡುಪಿಯಲ್ಲಿ ಪೊಲೀಸ್ ಧ್ವಜ ದಿನಾಚರಣೆ

ಉಡುಪಿಯಲ್ಲಿ ಪೊಲೀಸ್ ಧ್ವಜ ದಿನಾಚರಣೆ

ಡುಪಿ: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯನ್ನು ಇಂದು ನಗರದ ಮಿಷನ್ ಕಂಪೌಂಡ್ ಬಳಿಯ ಪೊಲೀಸ್ ಕವಾಯತು ಚಂದು ಮೈದಾನದಲ್ಲಿ ಆಚರಿಸಲಾಯಿತು.

ನಿವೃತ್ತ ಮಹಿಳಾ ಪೊಲೀಸ್ ನಿರೀಕ್ಷಕಿ ಸುಜಾತ ಸಾಲಿಯಾನ್ ಅವರು ಪೊಲೀಸ್ ಧ್ವಜ ದಿನಾಚರಣೆಯ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಧ್ವಜ ದಿನಾಚರಣೆಯು ಪೊಲೀಸ್ ಇಲಾಖೆಯ ಮಹತ್ವದ ದಿನವಾಗಿದೆ.

ಕರ್ನಾಟಕ ಪೊಲೀಸ್ ಪಡೆಯು ಅಧಿಕೃತವಾಗಿ ರಚನೆಯಾದ ನೆನಪಿಗಾಗಿ ಈ ದಿನವನ್ನು ರಾಜ್ಯದ ಎಲ್ಲೆಡೆ ಆಚರಿಸಲಾಗುತ್ತಿದೆ. ಈ ಧ್ವಜವು ಶಿಸ್ತು, ಕರ್ತವ್ಯ ನಿಷ್ಠೆ, ಕಾನೂನು ಪಾಲನೆ ಹಾಗೂ ರಕ್ಷಣೆಯ ಸಂಕೇತವಾಗಿದೆ ಎಂದರು.

ಪ್ರತೀ ವರ್ಷ ಪೊಲೀಸ್ ಧ್ವಜ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡುವುದರೊಂದಿಗೆ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ಹೆಗ್ಗಳಿಕೆ ಕರ್ನಾಟಕ ಪೊಲೀಸರಿಗಿದೆ. ಕರ್ನಾಟಕ ಪೊಲೀಸ್ ಇಲಾಖೆ ಯಲ್ಲಿಯೂ ಉಡುಪಿ ಜಿಲ್ಲೆಯ ಪೊಲೀಸರು ಮೊದಲನೇ ಸ್ಥಾನದಲ್ಲಿದ್ದಾರೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆರೋಗ್ಯ ರಕ್ಷಣೆ ಯೋಜನೆಯನ್ನು ಪ್ರಾರಂಭಿಸಿದ್ದು, ಯೋಜನೆ ಯಡಿ ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಸಾಮಾನ್ಯ ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ 1.5 ಲಕ್ಷ ರೂ., ತುರ್ತು ಸಂದರ್ಭದಲ್ಲಿ 3 ಲಕ್ಷ ರೂ. ಮಂಜೂರು ಮಾಡಲಾಗುವುದು. ಜಿಲ್ಲೆಯಲ್ಲಿ ಒಟ್ಟು ಮೂರು ಮಂದಿ ನಿವೃತ್ತ ಪೊಲೀಸ್ ಸಿಬ್ಬಂದಿಗಳು ಈ ಯೋಜನೆಯ ಪ್ರಯೋಜನ ಪಡೆದಿರುವುದಾಗಿ ಎಸ್ಪಿ ತಿಳಿಸಿದರು.

ಪ್ರತೀ ವರ್ಷ ಸುಮಾರು 13 ಲಕ್ಷ ರೂ.ಗಳಿಗೂ ಅಧಿಕ ಮೊತ್ತ ಮಂಜೂರು ಆಗುತ್ತಿದ್ದು, ಇನ್ನೂ ಹೆಚ್ಚಿನ ಮೊತ್ತ ಮಂಜೂರಾತಿಗಾಗಿ ಅನುದಾನದ ಕೊರತೆ ಇದ್ದು, ಪ್ರಧಾನ ಕಛೇರಿಗೆ 15 ಲಕ್ಷ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಪ್ರಸಕ್ತ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನಿವೃತ್ತರ ಕಲ್ಯಾಣ ಖಾತೆಯಿಂದ 13,08,050 ರೂ.ಗಳ ವೈದ್ಯಕೀಯ ಧನ ಸಹಾಯ ನೀಡಲಾಗಿದೆ. ಯಾವುದೇ ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿಗಳು ಅಹವಾಲುಗಳಿದ್ದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯನ್ನು ಸಂಪರ್ಕಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪಥಸಂಚಲನದ ನೇತೃತ್ವವನ್ನು ಡಿಎಆರ್‌ನ ಆರ್‌ಪಿಐ ರವಿಕುಮಾರ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವೈದ್ಯಕೀಯ ಧನ ಸಹಾಯವನ್ನು ವಿತರಿಸಲಾಯಿತು.

ಡಿಎಆರ್‌ನ ಯೋಗೀಶ್ ನಾಯ್ಕ್ ಅವರು ಕಾರ್ಯಕ್ರಮ ನಿರೂಪಿಸಿದರೆ, ಎಎಸ್‌ಪಿ ಸುಧಾಕರ್ ನಾಯಕ್ ವಂದಿಸಿದರು.




Dailyhunt
Disclaimer: This content has not been generated, created or edited by Dailyhunt. Publisher: Varthabharathi