ಬೆಂಗಳೂರು, ಅ.24: "ಕರ್ನಾಟಕದಲ್ಲಿ ನೈಸರ್ಗಿಕ ಸಂಪತ್ತು ಬಹಳ ಶ್ರೀಮಂತವಾಗಿದೆ. ಪಾರಂಪರಿಕ ತಾಣಗಳನ್ನು ಹೊಂದಿದೆ. ಹಂಪಿ, ಬೇಲೂರು, ಮಲೆನಾಡು, ಮೈಸೂರು, ಕರಾವಳಿ, ಕೂರ್ಗ್ ಹೀಗೆ ಎಲ್ಲ ಪ್ರವಾಸಿ ಕೇಂದ್ರಗಳನ್ನು ಆಕರ್ಷಣೆ ಮಾಡುವುದಕ್ಕಾಗಿ, ಹೊಸ ತಾಣಗಳನ್ನು ಪರಿಚಯಿಸಲು ನಮ್ಮ ಸರ್ಕಾರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದೆ" ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳ ಭೇಟಿಗೆ ಅವಕಾಶ ಮಾಡಿಕೊಡುವ ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್ ಚಾರಿಯಟ್' ಸೇವೆಗೆ ಮೆಜೆಸ್ಟಿಕ್ ಹಾಗೂ ಕೆಂಗೇರಿ ರೈಲು ನಿಲ್ದಾಣದಲ್ಲಿ ಶನಿವಾರ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮದವರ ಜೊತೆ ಅವರು ಮಾತನಾಡುತ್ತಿದ್ದರು.
"ಗೋಲ್ಡನ್ ಚಾರಿಯೇಟ್ ಮೂಲಕ ಜನರಿಗೆ ಕರ್ನಾಟಕದ ಪ್ರವಾಸಿ ತಾಣಗಳನ್ನು ಪರಿಚಯಿಸುವ ಹಾಗೂ ಉದ್ಯೋಗ ಸೃಷ್ಟಿಯ ಗುರಿಯನ್ನು ಹೊಂದಿದ್ದೇವೆ. ಇದರಿಂದ ನಮಗೆ ಲಾಭದ ಅಗತ್ಯವಿಲ್ಲ. ಆದರೆ, ನಷ್ಟವಾಗಬಾರದು. ನಷ್ಟವಾಗದಂತೆ ನಾವೆಲ್ಲ ನೋಡಿಕೊಳ್ಳಬೇಕು. ಇದಕ್ಕೆ ಎಲ್ಲರ ನೆರವು ಬೇಕು" ಎಂದರು.
ಗೋಲ್ಡನ್ ಚಾರಿಯಟ್ ಕರ್ನಾಟಕದ ಹೆಮ್ಮೆ
"ಪ್ರವಾಸೋದ್ಯಮ ಇಲಾಖೆಯ ಕರ್ನಾಟಕ ದರ್ಶನ ಯೋಜನೆ ಈ ಮಧ್ಯೆ ನಿಂತು ಹೋಗಿತ್ತು. ನಮ್ಮ ಸರ್ಕಾರ ಬಂದ ಮೇಲೆ ಸಚಿವ ಕೆ ಜೆ ಜಾರ್ಜ್ ಜವಾಬ್ದಾರಿ ತೆಗೆದುಕೊಂಡ ನಂತರ, ಅದಕ್ಕೆ ಹೊಸ ರೂಪ ಕೊಟ್ಟು ಪ್ರತಿಷ್ಠಿತ 'ಗೋಲ್ಡನ್ ಚಾರಿಯಟ್' ಆರಂಭಿಸಿದ್ದಾರೆ. ಹೊಸ ಪ್ರವಾಸಿ ಮಾರ್ಗಗಳನ್ನು ನಿಗದಿ ಮಾಡಿ, ಐಷಾರಾಮಿ ಸೌಲಭ್ಯಗಳನ್ನು ನೀಡಿದೆ. ಈಗಾಗಲೇ 75 ಮಂದಿ ಪ್ರಯಾಣ ಮಾಡುತ್ತಿದ್ದಾರೆ" ಎಂದು ತಿಳಿಸಿದರು.
"ಕರ್ನಾಟಕವನ್ನು ಯಾರೂ ಸಂಪೂರ್ಣವಾಗಿ ನೋಡಿಲ್ಲವೋ ಅವರಿಗೆ ಪ್ರವಾಸ ಮಾಡಲು ಉತ್ತೇಜನ ಕೊಡಬೇಕು. ಅದಕ್ಕಾಗಿ ರಾಜ್ಯ ಸರ್ಕಾರ ವಿಶೇಷ ರೈಲ್ವೇ ಬೋಗಿಗಳನ್ನು ನಿರ್ಮಿಸಿ, ರೈಲ್ವೇ ಇಲಾಖೆಯ ರೂಟ್ ಅನ್ನು ಬಳಸಿಕೊಂಡು ಯೋಜನೆಗೆ ಮರುಚಾಲನೆ ನೀಡಲಾಗಿದೆ. ಇಷ್ಟೇ ಅಲ್ಲದೇ, ದಕ್ಷಿಣ ಭಾರತದ ತಾಣಗಳನ್ನು ಪರಿಚಯಿಸುವ ಉದ್ದೇಶದಿಂದ 'ಜ್ಯೂಯಲ್ಸ್ ಆಫ್ ಸೌತ್' ಎನ್ನುವ ಮತ್ತೊಂದು ಪ್ರವಾಸಿ ಯೋಜನೆಯನ್ನು ರೂಪಿಸಿದ್ದೇವೆ. ಹಂಪಿ, ಮಹಾಬಲಿಪುರ, ಮೈಸೂರು ಬೆಂಗಳೂರು, ಕೊಚ್ಚಿನ್, ಚಿಟ್ಟಿನಾಡು ಮುಂತಾದ ಉತ್ತಮ ಪ್ರವಾಸಿ ಕೇಂದ್ರಗಳನ್ನು ಸಂಪರ್ಕಿಸುವ ರೂಟ್ ಅನ್ನು ತಯಾರು ಮಾಡಿದ್ದೇವೆ. ನಾಲ್ಕು ದಿನ ಪ್ರವಾಸ ಮಾಡುವ 'ಡ್ರೀಮ್ಸ್ ಆಫ್ ಕರ್ನಾಟಕ' ಪ್ರವಾಸಿ ಯೋಜನೆ ಕೂಡ ಸಿದ್ಧವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿಯನ್ನು ನೀಡುತ್ತೇವೆ" ಎಂದರು.
"ಇಡೀ ದೇಶದಲ್ಲಿ ಪ್ರವಾಸಕ್ಕಾಗಿ ಇಂತಹ 4 ವಿಶೇಷ ರೈಲುಗಳಿವೆ. ಇದರಲ್ಲಿ ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಮಾತ್ರ ಐಷಾರಾಮಿ ಸೌಲಭ್ಯಗಳಿರುವ ಎರಡು ರೈಲುಗಳಿವೆ. ಮೊನ್ನೆ ಮೈಸೂರು ದಸರಾಕ್ಕೆ ದೇಶ ವಿದೇಶದಿಂದ ಪ್ರವಾಸಿಗರು, ವಿದೇಶಿ ರಾಯಭಾರಿಗಳು ಆಗಮಿಸಿದ್ದರು. ಎಲ್ಲವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ನಮ್ಮ ರಾಜ್ಯದ ಪ್ರವಾಸಿ ತಾಣಗಳಿಗೆ ಹೊಸ ರೂಪ ನೀಡುವ ಉದ್ದೇಶದಿಂದ ಅನೇಕ ವಿಶೇಷ ಕಾರ್ಯಕ್ರಗಳನ್ನು ರೂಪಿಸುತ್ತಿದೆ" ಎಂದು ಹೇಳಿದರು.
ಗೋಲ್ಡನ್ ಚಾರಿಯಟ್ ಪ್ರಯಾಣ ಜನಸಾಮಾನ್ಯರಿಗೂ ಕೈಗೆಟುಕಲಿ
"ಐಷಾರಾಮಿ ರೈಲು ಪ್ರಯಾಣವೆಂದರೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಬಾರದು. ಕರ್ನಾಟಕದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ರಾಜ್ಯದ ಸಾಮಾನ್ಯ ಪ್ರವಾಸಿಗರಿಗೂ ಗೋಲ್ಡನ್ ಚಾರಿಯಟ್ ರೈಲಿನಲ್ಲಿ ಪ್ರಯಾಣಿಸುವ ಅವಕಾಶ ಸಿಗಬೇಕು. ಈ ಉದ್ದೇಶದಿಂದ ಆಫ್ ಸೀಸನ್ನಲ್ಲಿ ಕಡಿಮೆ ದರದಲ್ಲಿ ಪ್ರವಾಸಕ್ಕೆ ಅವಕಾಶ ಕಲ್ಪಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ" ಎಂದು ತಿಳಿಸಿದರು.
ಐಷಾರಾಮಿ ಅನುಭವ; ಜನರಿಗೂ ಸಿಗಲಿ ಅವಕಾಶ
"ಗೋಲ್ಡನ್ ಚಾರಿಯಟ್ ರೈಲಿನಲ್ಲಿ ಎರಡು ರೆಸ್ಟೋರೆಂಟ್ಗಳಿವೆ. ಸುಮಾರು 80 ಪ್ರಯಾಣಿಕರಿಗೆ ವ್ಯವಸ್ಥೆಯಿದ್ದು, ಅವರ ಸೇವೆಗಾಗಿ ಸುಮಾರು 60 ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಸ್ಪಾ, ಜಿಮ್, ಸಸ್ಯಾಹಾರ ಮತ್ತು ಮಾಂಸಾಹಾರದ ಊಟದ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳಿವೆ. ರಾತ್ರಿ ಆರಾಮವಾಗಿ ತಂಗಲು ಕೂಡ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಎಲ್ಲವನ್ನೂ ನೋಡಿ ಬಹಳ ಸಂತೋಷವಾಯಿತು. ನಾನೂ ಈ ರೈಲಿನಲ್ಲಿ ಪ್ರವಾಸ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ" ಎಂದು ಹೇಳಿದರು.
"ಈ ರೈಲು ಕರ್ನಾಟಕದ ಪ್ರವಾಸೋದ್ಯಮದ ಅಮೂಲ್ಯ ಆಸ್ತಿ. ಹಿಂದೆ ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗದಿದ್ದ ಈ ರೈಲಿಗೆ ಮರುಚಾಲನೆ ನೀಡಿ, ಪ್ರವಾಸಿಗರನ್ನು ಆಕರ್ಷಿಸುವ ಉತ್ತಮ ಮಾರ್ಗಗಳಲ್ಲಿ ಸಂಚರಿಸುವಂತೆ ಮಾಡಲಾಗುತ್ತಿದೆ. ಈ ಪ್ರಯತ್ನ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊರಗಿನವರಿಗಷ್ಟೇ ಅಲ್ಲ, ನಮ್ಮವರಿಗೂ ಇರಲಿ
"ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲಾದ್ದರಿಂದ ಪ್ರಯಾಣದ ವೆಚ್ಚ ತುಸು ಹೆಚ್ಚಿದೆ. ಆದರೆ ಕರ್ನಾಟಕದ ಪ್ರವಾಸಿಗರು ಇದರ ಸೌಲಭ್ಯದಿಂದ ವಂಚಿತರಾಗಬಾರದು. ಕಡಿಮೆ ದರದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಮೂಲಕ ಹೆಚ್ಚಿನ ಜನರನ್ನು ಆಕರ್ಷಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ರೈಲು ಹೊರರಾಜ್ಯಗಳ ಪ್ರವಾಸಿಗರಿಗೆ ಮಾತ್ರ ಸೀಮಿತವಾಗಬಾರದು. ನಮ್ಮ ಕರ್ನಾಟಕದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಈ ಬಗ್ಗೆ ರೈಲ್ವೆ ಇಲಾಖೆಯೊಂದಿಗೂ ಮಾತುಕತೆ ನಡೆಸಲಾಗಿದೆ" ಎಂದರು.
ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ
"ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಭಾರತೀಯ ರೈಲ್ವೆ ಹಾಗೂ ಐಆರ್ಸಿಟಿಸಿ ಸಹಯೋಗದಲ್ಲಿ ಗೋಲ್ಡನ್ ಚಾರಿಯಟ್ ರೈಲಿನ ಸೇವೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ವ್ಯವಸ್ಥೆಯಿಂದ ಪ್ರವಾಸಿಗರಿಗೆ ಅನುಕೂಲವಾಗುವುದರ ಜತೆಗೆ ಪ್ರವಾಸಿ ತಾಣಗಳಲ್ಲಿನ ಹೋಟೆಲ್ ಉದ್ಯಮ ಸೇರಿದಂತೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ" ಎಂದು ಹೇಳಿದರು.
ಸಾಮಾನ್ಯ ರೈಲು ಸಂಚಾರಕ್ಕೆ ಧಕ್ಕೆಯಾಗದಂತೆ ಮಾರ್ಗ ವಿಸ್ತರಣೆ
ಗೋಲ್ಡನ್ ಚಾರಿಯಟ್ ರೈಲಿನ ಮಾರ್ಗ ವಿಸ್ತರಣೆ ಕುರಿತು ಕೇಳಿದಾಗ, "ಮಾರ್ಗ ವಿಸ್ತರಣೆ ಮಾಡುವಾಗ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಬೇಕು. ಇದರಿಂದ ಸಾಮಾನ್ಯ ರೈಲುಗಳ ನಿಯಮಿತ ಸಂಚಾರಕ್ಕೆ ಯಾವುದೇ ತೊಂದರೆಯಾಗಬಾರದು. ಎರಡೂ ಇಲಾಖೆಗಳ ಅಧಿಕಾರಿಗಳು ಚರ್ಚಿಸಿ, ಸೂಕ್ತ ಮಾರ್ಗವನ್ನು ಅಂತಿಮಗೊಳಿಸಲಿದ್ದಾರೆ" ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣನವರನ್ನು ಆಹ್ವಾನಿಸಿಲ್ಲವೇ ಎಂದಾಗ, "ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಸೋಮಣ್ಣನವರು ವೀಡಿಯೋ ಸಂವಾದದಲ್ಲಿ ಸೇರ್ಪಡೆಗೊಳ್ಳುತ್ತಾರೆ" ಎಂದು ಹೇಳಿದರು.
ಸೌದಿ ಅರಬಿಯಾ ಬಿಕ್ಕಟ್ಟು; ಕನ್ನಡಿಗರಿಗಾಗಿ ಸಹಾಯವಾಣಿ
ಮೆಕ್ಕಾ, ಸೌದಿ ಅರೇಬಿಯಾದಲ್ಲಿ ಕನ್ನಡನಾಡಿನ ಪ್ರವಾಸಿಗರು ಸಿಲುಕಿರುವ ಬಗ್ಗೆ ಕೇಳಿದಾಗ, "ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ವಿದೇಶಾಂಗ ಸಚಿವರ ಜೊತೆಯಲ್ಲೂ ಸಂಪರ್ಕದಲ್ಲಿದ್ದೇನೆ. ಅಗತ್ಯಬಿದ್ದರೆ ವಿಮಾನ ಸಂಪರ್ಕ ಭದ್ರತೆ ಒದಗಿಸುವಂತೆ ಕೋರಿದ್ದೇನೆ. ವಿಮಾನಗಳ ಹಾರಾಟಕ್ಕೆ ತಾಂತ್ರಿಕ ತೊಂದರೆಯಾಗಿದೆ. ಇದರ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ. ನಮ್ಮ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ" ಎಂದರು.
"ಕನ್ನಡಿಗರಿಗಾಗಿ ಸಹಾಯವಾಣಿ ತೆರೆಯಲಾಗಿದೆ. ಯಾರೂ ಸಹ ಗಾಬರಿಯಾಗುವುದು ಬೇಡ. ಅಲ್ಪಸಂಖ್ಯಾತ ಇಲಾಖೆ, ಕೇಂದ್ರ ಸರಕಾರ ಸೇರಿದಂತೆ ನಮ್ಮ ಸರ್ಕಾರವೂ ನಿಮ್ಮ ಜೊತೆಗಿದೆ" ಎಂದು ಹೇಳಿದರು.

