Dailyhunt
ಉತ್ತಮ ನಾಗರೀಕರಾಗಲು ಕಾಲೇಜುಗಳಿಲ್ಲ: ಸ್ಪೀಕರ್‌ ಯು.ಟಿ.ಖಾದರ್

ಉತ್ತಮ ನಾಗರೀಕರಾಗಲು ಕಾಲೇಜುಗಳಿಲ್ಲ: ಸ್ಪೀಕರ್‌ ಯು.ಟಿ.ಖಾದರ್

ಬೆಂಗಳೂರು : ಪಿ.ಜಿ.ಆರ್.ಸಿಂಧ್ಯ ಹಾಗೂ ಸಂತೋಷ್ ಹೆಗಡೆ ಅಂತವರು ಸಮಾಜಕ್ಕೆ ಮಾದರಿ. ಇಂಜಿನಿಯರ್, ವೈದ್ಯರು, ವಕೀಲರು, ಪೊಲೀಸರಾಗಲು ಕಾಲೇಜುಗಳಿವೆ. ಆದರೆ ಉತ್ತಮ ನಾಗರೀಕರಾಗಲು ಒಂದೇ ಒಂದು ಕಾಲೇಜು ಇಲ್ಲ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕದ ವತಿಯಿಂದ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ 'ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್‍ಗೆ ಭಾಜನರಾಗಿರುವ ಪಿ.ಜಿ.ಆರ್.ಸಿಂಧ್ಯ ಅವರಿಗೆ ಅಭಿನಂದನಾ ಸಮಾರಂಭ'ದಲ್ಲಿ ಅವರು ಮಾತನಾಡಿದರು.

ಯುವಜನರಿಗೆ ಸ್ಪೂರ್ತಿ ಮತ್ತು ಮಾದರಿಯಾಗುವಂತಹ ವ್ಯಕ್ತಿತ್ವವನ್ನು ರೂಪಿಸಿಕೊಂಡ ಪಿ.ಜಿ.ಆರ್.ಸಿಂಧ್ಯ ಅವರಂತಹ ವ್ಯಕ್ತಿಗಳನ್ನು ನೋಡಿಕೊಂಡು ಅವರ ವ್ಯಕ್ತತ್ವವನ್ನು ರೂಢಿಸಿಕೊಂಡು ಯುವಜನರು ಸಮಾಜದಲ್ಲಿ ಉತ್ತಮ ನಾಗರೀಕರಾಗಬೇಕು ಎಂದರು.

ಪಿ.ಜಿ.ಆರ್.ಸಿಂಧ್ಯ ಅವರಿಗೆ ಸಿಕ್ಕಿರುವ ಡಾಕ್ಟರೇಟ್ ಕರ್ನಾಟಕದ ಸ್ಕೌಟ್ಸ್ ಮತ್ತು ಗೈಡ್‍ಗೆ ಸಂದಿರುವ ಗೌರವವಾಗಿದೆ. ಇದರಿಂದ ರಾಜ್ಯದ ಜನತೆಗೆ, ಯುವಜನರಿಗೆ ಹಾಗೂ ಮುಂದೆ ಹುಟ್ಟುವ ಮಕ್ಕಳಿಗೆ ಕೂಡ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.

ಹಿಂದೆ ಪಿ.ಜಿ.ಆರ್.ಸಿಂಧ್ಯ ಅವರು ಸಚಿವರಾಗಿದ್ದಾಗ ಅರಮನೆ ಮೈದಾನದಲ್ಲಿ ಒಂದು ಕಾರ್ಯಕ್ರಮ ನಡೆಯಿತು. ಆಗ ನಾನು ಸ್ಕೌಟ್ ಆಗಿ ಭಾಗವಹಿಸಿದ್ದೆ, 25-30 ವರ್ಷ ಆದ ನಂತರ ಮತ್ತೆ ಕಾರ್ಯಕ್ರಮವಾದಾಗ ಸಚಿವನಾಗಿ ಭಾಗವಹಿಸಿದ್ದೆ ಎಂದು ನೆನಪು ಮಾಡಿಕೊಂಡರು.

ನಾನು ಸಚಿವನಾಗಿದ್ದಾಗ ಉತ್ತಮ ಹೇಳಿಕೆ ನೀಡಿದರೆ, ಉತ್ತಮ ಕೆಲಸ ಮಾಡಿದರೆ ಪಿ.ಜಿ.ಆರ್.ಸಿಂಧ್ಯ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದರು. ನಾವು ಮಾತ್ರ ನಾಯಕರಾಗುವುದಲ್ಲ. ನಮ್ಮಂತೆ ನೂರಾರು ನಾಯಕರು ಆಗಬೇಕು ಎನ್ನುವ ವ್ಯಕ್ತಿತ್ವ ಪಿ.ಜಿ.ಆರ್.ಸಿಂಧ್ಯ ಅವರಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, ಸಾಮಾನ್ಯವಾದ ಮನುಷ್ಯ ಕೂಡ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಿಂದ ನಾವು ಶ್ರಮಪಟ್ಟರೆ ಉನ್ನತಮಟ್ಟಕ್ಕೆ ಹೋಗಬಹುದು. ನಾನು ಕೆಲಸ ಮಾಡಿರುವ ಎಲ್ಲ ಇಲಾಖೆಗಳಲ್ಲೂ ನನಗೆ ಉತ್ತಮ ಅವಕಾಶಗಳು ಸಿಕ್ಕಿವೆ. ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಕೊನೆಯ ಒಪ್ಪಂದ ಪತ್ರಕ್ಕೆ ಸಹಿ ಮಾಡುವ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್.ಸುರೇಶ್ ಕುಮಾರ್, ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ನ ಉಪಾಧ್ಯಕ್ಷ ಕೊಂಡಜ್ಜಿ ಷಣ್ಮುಖಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕುಸಿದು ಬಿದ್ದ ನ್ಯಾ.ಸಂತೋಷ್ ಹೆಗ್ಡೆ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು, ಕೆಲವೇ ನಿಮಿಷದ ಭಾಷಣದ ಮುಗಿಸಿ ವೇದಿಕೆಯಲ್ಲಿ ಕುಳಿತುಕೊಂಡಿದ್ದರು. ಆರೋಗ್ಯದಲ್ಲಿ ಏರುಪೇರು ಆಗಿದೆ (ತಲೆ ಸುತ್ತು ಬಂದು) ಎಂದು ನಿರ್ಗಮಿಸುವ ಸಂದರ್ಭದಲ್ಲಿ ವೇದಿಕೆಯ ಮೇಲೆಯೇ ಕುಸಿದು ಬಿದ್ದಿರುವ ಘಟನೆ ನಡೆಯಿತು.

ಕೆಲ ಕಾಲ ಸಭಾಂಗಣದಲ್ಲಿ ಗೊಂದಲವುಂಟಾಗಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಆತಂಕಕ್ಕೆ ಒಳಗಾದರು. ಘಟನೆಯ ವೇಳೆ ವೇದಿಕೆಯಲ್ಲಿದ್ದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ತಕ್ಷಣವೇ ಸ್ಪಂದಿಸಿ,ತಮ್ಮ ಕಾರಿನಲ್ಲಿ ಸಂತೋಷ್‌ ಹೆಗ್ಡೆ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi